ಮಂಡ್ಯ: ಕಾಲೇಜು ಮುಗಿಸಿಕೊಂಡು ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದ ತೊಣ್ಣೂರು ಕೆರೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ಕೆ.ಆರ್.ಪೇಟೆ ತಾಲೂಕಿನ ದಾಸನದೊಡ್ಡಿ ಕೊಪ್ಪಲು ಗ್ರಾಮದ ಯಶ್ವಂತ್ (17) ಹಾಗೂ ಹೊಸೂರು ಗ್ರಾಮದ ರಾಜು (16) ಎಂದು ಗುರುತಿಸಲಾಗಿದೆ. ಇಬ್ಬರೂ ಚಿನಕುರುಳಿ ಗ್ರಾಮದ ಎಸ್ಟಿಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಕಾಲೇಜು ಮುಗಿಸಿ ಈಜಲು ತೆರಳಿದ್ದ ವಿದ್ಯಾರ್ಥಿಗಳು
ಮಾಹಿತಿಯ ಪ್ರಕಾರ, ಕಾಲೇಜು ಮುಗಿಸಿಕೊಂಡು ಬಂದಿದ್ದ ಯಶ್ವಂತ್ ಮತ್ತು ರಾಜು ತೊಣ್ಣೂರು ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರೂ ಮೃತಪಟ್ಟಿರುವುದು ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡವಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಿಂದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.









