ಬೆಂಗಳೂರು: ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.
ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಶಾಂತಿಭಂಗದ ಆರೋಪಗಳಿಗೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರ ಮತ್ತು ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ.
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ನಿರ್ಮಾಪಕ ಭೋಜರಾಜ ರೈ ನೀಡಿದ ದೂರಿನ ಆಧಾರದಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಗಲಾಟೆ?
ಕಳೆದ ತಿಂಗಳ 20ರಂದು ನಿರ್ಮಾಪಕ ಭೋಜರಾಜ ರೈ ಅವರು ನಟ ಧನ್ವೀರ್ ಅವರ ಮನೆಗೆ ತೆರಳಿ, ಅಲ್ಲಿಂದ ನಾಗರಾಜ್ ಅವರನ್ನು ಕರೆತಂದಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಬಳಿಕ ಧನ್ವೀರ್ ಅವರು ಭೋಜರಾಜ ರೈ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಆರಂಭದಲ್ಲಿ ಎರಡೂ ಪೊಲೀಸ್ ಠಾಣೆಗಳಲ್ಲಿ ಎನ್ಸಿಆರ್ ದಾಖಲಿಸಲಾಗಿತ್ತು. ಇದೀಗ ನ್ಯಾಯಾಲಯದ ಸೂಚನೆಯ ಮೇರೆಗೆ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಆಡಿಯೋ ಕ್ಲಿಪ್ಗಳ ಪರಿಶೀಲನೆ:
ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಸಂಬಂಧಿತ ಆಡಿಯೋ ಕ್ಲಿಪ್ಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆಡಿಯೋಗಳ ವಿಧಿವಿಜ್ಞಾನ ಹಾಗೂ ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ನಟ ಧನ್ವೀರ್ ಅವರ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.
ಇದೇ ವೇಳೆ, ಈ ಗಲಾಟೆಯ ಹಿಂದಿನ ಕಾರಣ ಎನ್ನಲಾಗುತ್ತಿರುವ ₹10 ಕೋಟಿ ಹಣದ ವಹಿವಾಟಿನ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಹಣಕಾಸಿನ ವ್ಯವಹಾರಕ್ಕೂ ವಿವಾದಕ್ಕೂ ಇರುವ ಸಂಬಂಧದ ಕುರಿತು ತನಿಖೆ ಮುಂದುವರಿದಿದೆ.
ಇನ್ನೆರಡು ಠಾಣೆಗಳಲ್ಲೂ ಪ್ರಕರಣ ದಾಖಲಾಗುವ ಸಾಧ್ಯತೆ:
ಚಾಮರಾಜಪೇಟೆ ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲೂ ನಟ ಧನ್ವೀರ್ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಸಂಬಂಧ ಪೊಲೀಸರು ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಇನ್ನು, ರಾಜರಾಜೇಶ್ವರಿನಗರ ಮತ್ತು ಬಸವೇಶ್ವರನಗರ ಪೊಲೀಸರು ನಟ ಧನ್ವೀರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆಯೂ ಇದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಯಾವ ಅಂಶಗಳು ಬಹಿರಂಗವಾಗಲಿವೆ ಎಂಬುದನ್ನು ಕಾದುನೋಡಬೇಕಿದೆ.










