ರಾಮನಗರ: ಮಾಗಡಿ ತಾಲೂಕಿನ ಕಲ್ಲುದೇವನಹಳ್ಳಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ನರಹಂತಕ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಸೆರೆಹಿಡಿದಿದ್ದಾರೆ.
ಅಕ್ಟೋಬರ್ 12ರಂದು ಅರ್ಚಕ ಶಿವಸ್ವಾಮಿ (60) ಅವರ ಮೇಲೆ ದಾಳಿ ನಡೆಸಿ ಕೊಂದಿದ್ದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಅರ್ಚಕನನ್ನು ಬಲಿ ಪಡೆದ ಘಟನೆಯ ಬಳಿಕ ಚಿರತೆ ಅಕ್ಕಪಕ್ಕದ ಗ್ರಾಮಗಳಲ್ಲೂ ಕಾಣಿಸಿಕೊಂಡಿತ್ತು. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಒಂದು ವಾರದಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು.
ನಾಲ್ಕು ಬೋನ್ಗಳ ಅಳವಡಿಕೆ:
ಚಿರತೆಯನ್ನು ಸೆರೆಹಿಡಿಯುವ ಉದ್ದೇಶದಿಂದ ಗ್ರಾಮದ ಹೊರವಲಯದಲ್ಲಿ ಒಟ್ಟು ನಾಲ್ಕು ಬೋನ್ಗಳನ್ನು ಅಳವಡಿಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯ ಫಲವಾಗಿ ಅಕ್ಟೋಬರ್ 29ರಂದು 7ರಿಂದ 8 ವರ್ಷ ವಯಸ್ಸಿನ ಗಂಡು ಚಿರತೆ ಬೋನಿಗೆ ಬಿದ್ದಿದೆ.
ಚಿರತೆ ಸೆರೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಕಲ್ಲುದೇವನಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿರತೆ ಸೆರೆ: ಗ್ರಾಮಸ್ಥರು ನಿರಾಳ:
ಸೆರೆಸಿಕ್ಕ ಚಿರತೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಸುರಕ್ಷಿತ ಅರಣ್ಯ ಪ್ರದೇಶಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಹಲವು ದಿನಗಳಿಂದ ಚಿರತೆಯ ಭೀತಿಯಲ್ಲಿದ್ದ ಕಲ್ಲುದೇವನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಅರ್ಚಕನ ಸಾವಿನ ಬಳಿಕ ಗ್ರಾಮದಲ್ಲಿ ಮೂಡಿದ್ದ ಆತಂಕಕ್ಕೆ ಚಿರತೆ ಸೆರೆ ಕಾರ್ಯಾಚರಣೆಯಿಂದ ತಾತ್ಕಾಲಿಕವಾಗಿ ತೆರೆ ಬಿದ್ದಿದೆ.










