ವಿಜಯಸಾಕ್ಷಿ ಸುದ್ದಿ, ಗದಗ: ಯುವಜನತೆ ಸ್ವಯಂ ಪ್ರೇರಣೆಯಿಂದ ದುಶ್ಚಟಗಳಿಂದ ದೂರವಿದ್ದು, ವ್ಯಸನಮುಕ್ತ ಸಮಾಜ ಹಾಗೂ ನಶಾಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕರೆ ನೀಡಿದರು.
ಬೆಟಗೇರಿಯ ಆದರ್ಶ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆದರ್ಶ ಶಿಕ್ಷಣ ಸಮಿತಿಯ ಶ್ರೀ ಡಿ.ಎಸ್. ಕುರ್ತಕೋಟಿ ಮೆಮೋರಿಯಲ್ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ವ್ಯಸನ ಮುಕ್ತ ದಿನಾಚರಣೆ–2026’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಗಸ್ಟ್ 1ರಂದು ಜನಿಸಿದ ಪರಮಪೂಜ್ಯ ಮಹಾಂತ ಶಿವಯೋಗಿಗಳು 1975ರಿಂದ ಸುಮಾರು 42 ವರ್ಷಗಳ ಕಾಲ ‘ಮಹಾಂತ ಜೋಳಿಗೆ’ ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಸಿಗರೇಟ್, ತಂಬಾಕು, ಮದ್ಯಪಾನದಂತಹ ದುಶ್ಚಟಗಳನ್ನು ತ್ಯಜಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿವರ್ಷ ಆಗಸ್ಟ್ 1ರಂದು ವ್ಯಸನ ಮುಕ್ತ ದಿನಾಚರಣೆಯನ್ನು ಆಚರಿಸುತ್ತಿದೆ ಎಂದು ತಿಳಿಸಿದರು.
ಇಂದು ಅನೇಕ ಯುವಕರು ಮದ್ಯಪಾನ, ಧೂಮಪಾನ, ತಂಬಾಕು ಹಾಗೂ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಧೂಮಪಾನ ಶ್ವಾಸಕೋಶ, ಮದ್ಯಪಾನ ಯಕೃತ್ತು ಹಾಗೂ ಮಾದಕ ದ್ರವ್ಯಗಳು ನರಮಂಡಲವನ್ನು ಹಾನಿಗೊಳಿಸಿ ಕುಟುಂಬ ಮತ್ತು ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತಿವೆ ಎಂದು ಹೇಳಿದರು.
ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋವಿಜ್ಞಾನ ಸಹ ಪ್ರಾಧ್ಯಾಪಕ ಡಾ. ಫಕೀರಪ್ಪ ಗಾಣಿಗೇರ ಉಪನ್ಯಾಸ ನೀಡಿ, ಮಾದಕ ವ್ಯಸನವು ಕೇವಲ ದುಶ್ಚಟವಲ್ಲ, ಅದು ಮೆದುಳಿನಲ್ಲಿ ಉಂಟಾಗುವ ಜೈವಿಕ ಹಾಗೂ ರಾಸಾಯನಿಕ ಬದಲಾವಣೆಗಳಿಂದ ಉಂಟಾಗುವ ಕಾಯಿಲೆಯಾಗಿದೆ ಎಂದು ವಿವರಿಸಿದರು.
ದೇಶದಲ್ಲಿ ಸುಮಾರು 16 ಕೋಟಿ ಜನರು ಮದ್ಯಪಾನ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದು, 6 ಕೋಟಿ ಜನ ತೀವ್ರ ವ್ಯಸನಕ್ಕೆ ಒಳಗಾಗಿದ್ದಾರೆ. ಗಾಂಜಾ, ಒಪಿಯಾಯ್ಡ್‌ಗಳು ಹಾಗೂ ಇತರ ಮಾದಕ ವಸ್ತುಗಳ ಬಳಕೆಯಿಂದ ಲಕ್ಷಾಂತರ ಜನರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗೆ 10 ರಿಂದ 15 ವರ್ಷದ ಮಕ್ಕಳೂ ವೈಟ್ನರ್, ಪೇಂಟ್ ಥಿನ್ನರ್, ಪೆಟ್ರೋಲ್ ವಾಸನೆ ಸೇರಿದಂತೆ ಅಪಾಯಕಾರಿ ವಸ್ತುಗಳ ಮೂಲಕ ವ್ಯಸನಕ್ಕೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಆರಂಭಿಕ ಹಂತದಲ್ಲಿಯೇ ವ್ಯಸನದ ಲಕ್ಷಣಗಳನ್ನು ಗುರುತಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ನೀಡಿದರೆ ಅನೇಕ ಜೀವಗಳನ್ನು ಉಳಿಸಬಹುದು. ಯಾರಿಗಾದರೂ ವ್ಯಸನದ ಸಮಸ್ಯೆ ಇದ್ದರೆ ಸರ್ಕಾರಿ ಉಚಿತ ಸಹಾಯವಾಣಿ ‘ಟೆಲಿ-ಮಾನಸ’ ಮೂಲಕವೂ ನೆರವು ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎ.ಡಿ. ಗೋಡಕಿಂಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಬಿ. ಮಡ್ಲೂರ, ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಲಕ್ಷ್ಮಣ ಅರಿ, ಪ್ರಾಧ್ಯಾಪಕ ಬಾಹುಬಲಿ ಜೈನ, ಕಾಲೇಜಿನ ಪ್ರಾಂಶುಪಾಲ ಆರ್.ಆರ್. ಕುಲಕರ್ಣಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವ್ಯಸನ ಮುಕ್ತ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ರಾಜ್ಯ ಪ್ರಶಸ್ತಿ ವಿಜೇತ ಜನಪದ ಕಲಾವಿದ ವೀರಣ್ಣ ಅಂಗಡಿ ದುಶ್ಚಟಗಳ ದುಷ್ಪರಿಣಾಮ ಕುರಿತು ಸ್ವರಚಿತ ಗೀತೆ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಂದ ವ್ಯಸನ ವಿರೋಧಿ ಕಿರು ನಾಟಕವೂ ಪ್ರದರ್ಶನಗೊಂಡಿತು.
“ಡ್ರಗ್ಸ್‌ಗೆ ‘ನೋ’ ಹೇಳಿ… ಬದುಕಿಗೆ ‘ಯೆಸ್’ ಹೇಳಿ. ಯುವಜನತೆ ವ್ಯಸನದಿಂದ ದೂರವಿದ್ದಾಗ ಮಾತ್ರ ಆರೋಗ್ಯವಂತ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ.”
– ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ



