ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆ ಸಣ್ಣ ಮಳೆಯಲ್ಲೇ ಸಂಪೂರ್ಣವಾಗಿ ಹದಗೆಟ್ಟಿರುವ ಘಟನೆ ಭಕ್ತರು ಹಾಗೂ ಸ್ಥಳೀಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಕಾದಳ್ಳಿ ಮಾರ್ಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ರಸ್ತೆಯಲ್ಲಿ ಚರಂಡಿ ನೀರು ಹಾಗೂ ತ್ಯಾಜ್ಯ ತುಂಬಿಕೊಂಡಿದ್ದು, ರಸ್ತೆ ಕೊಳಚೆ ಗುಂಡಿಯಂತೆ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತು ದುರ್ವಾಸನೆ ಹರಡುತ್ತಿದೆ ಎಂದು ತಿಳಿದುಬಂದಿದೆ.
ಈ ದುಸ್ಥಿತಿಯಿಂದ ಮಾದಪ್ಪನ ಭಕ್ತರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಪಾದಯಾತ್ರೆ ಹಾಗೂ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಪೊದೆಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ರಸ್ತೆಯ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆ ಅಷ್ಟೇನೂ ಜೋರಾಗಿರದಿದ್ದರೂ ಈ ಮಟ್ಟದ ಅವ್ಯವಸ್ಥೆ ಉಂಟಾಗಿರುವುದು ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಶಾಸಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಬೇಕೆಂದು ಒತ್ತಾಯಿಸಿದ್ದಾರೆ.



