ಲಕ್ಷ್ಮೇಶ್ವರ: ದೇಶದ ಪ್ರಧಾನಿಯಾಗಿ ಸತತ 12 ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕಿ ಸ್ವಾತಂತ್ರ್ಯೋತ್ತರ ಭಾರತದ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶಿರಹಟ್ಟಿ ಬಿಜೆಪಿ ಮಂಡಲ ಹಾಗೂ ನಗರ ಘಟಕದಿಂದ ಆಯೋಜಿಸಿದ್ದ ವಿಶೇಷ ಪೂಜೆ ಹಾಗೂ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರದ ವಿರುದ್ಧ ದೇಶಾದ್ಯಂತ ಬಿಜೆಪಿ ಅಲೆ ಸೃಷ್ಟಿಸಿ, ಸತತ ಮೂರು ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ ಮೋದಿ ಅವರು ಹಿಂದುತ್ವ, ಸಾಂಸ್ಕೃತಿಕ ರಾಷ್ಟ್ರೀಯತೆ ಹಾಗೂ ಅಭಿವೃದ್ಧಿಯ ಮಂತ್ರದೊಂದಿಗೆ ದೇಶವನ್ನು ಅಭಿವೃದ್ಧಿಯ ಗಿರಿಶಿಖರದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರ ಪರಿಶ್ರಮವೇ ಈ ಯಶಸ್ಸಿನ ಹಿಂದೆ ದೊಡ್ಡ ಶಕ್ತಿ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಡಿ ಅಗ್ನಿವೀರರಾಗಿ ಆಯ್ಕೆಯಾಗಿರುವ ಪ್ರಕಾಶ ಕುಂಬಾರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಂಬಣ್ಣ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ, ಬಸವರಾಜ ಚಕ್ರಸಾಲಿ, ನಿಂಗಪ್ಪ ಬನ್ನಿ, ನೀಲಪ್ಪ ಹತ್ತಿ, ದುಂಡೇಶ ಕೋಟಗಿ, ಅನೀಲ ಮುಳಗುಂದ, ವೀರಣ್ಣ ಅಕ್ಕೂರ, ಈರಣ್ಣ ಪೂಜಾರ, ಸಂತೋಷ ಜಾವೂರ, ಮಂಜುನಾಥ ಗಜಾಕೋಶ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
“ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಧ್ಯೇಯದೊಂದಿಗೆ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ”
ಡಾ. ಚಂದ್ರು ಲಮಾಣಿ, ಶಾಸಕ



