HomeGadag Newsಕ್ರಮವಾಗದ ಹೊರತು ಹೋರಾಟ ನಿಲ್ಲದು : ರಾಜೂ ಖಾನಪ್ಪನವರ

ಕ್ರಮವಾಗದ ಹೊರತು ಹೋರಾಟ ನಿಲ್ಲದು : ರಾಜೂ ಖಾನಪ್ಪನವರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಈರಣ್ಣ ರಿತ್ತಿ ಅವರನ್ನು ಅಮಾನತುಗೋಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನಾ, ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಗೋಸಾವಿ ಸಮಾಜ ಬಾಂಧವರು ತಹಸೀಲ್ದಾರ ಕಚೇರಿ ಮುಂದೆ ನಡೆಸುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ಶ್ರೀರಾಮಸೇನಾ ರಾಜ್ಯ ಕಾರ್ಯದರ್ಶಿ ರಾಜೂ ಖಾನಪ್ಪನವರ ಭೇಟಿ ನೀಡಿ ಧರಣಿ ನಿರತರಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೀಗ ಎಲ್ಲರೂ ದೀಪಾವಳಿ ಸಂಭ್ರಮದಲ್ಲಿದ್ದರೆ, ಗೋಸಾವಿ ಬಾಂಧವರು ಇಲ್ಲಿ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಕಳೆದ 4 ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಈ ಕುರಿತಂತೆ ಸ್ಪಷ್ಟ ನಿರ್ಧಾರ ಪ್ರಕಟಿಸುತ್ತಿಲ್ಲ. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಪಿಎಸ್‌ಐ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವದು ನಮ್ಮ ಬೇಡಿಕೆಯಾಗಿದೆ. ಅವರ ಮೇಲೆ ಇನ್ನೊಂದು ಖಾಸಗಿ ದೂರನ್ನು ಸದ್ಯದಲ್ಲಿ ದಾಖಲಿಸಲಾಗುವುದು. ವಿಷಯ ಇನ್ನಷ್ಟು ದೊಡ್ಡದಾಗುವ ಮೊದಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸದ್ಯದಲ್ಲಿ ಬೆಳಗಾವಿ ಸುವರ್ಣಸೌಧದಿಂದ ಐ.ಜಿ ಕಚೇರಿಯವರಗೆ ಸುಮಾರು 5 ಸಾವಿರ ಶ್ರೀರಾಮಸೇನೆ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಕ್ರಮಕ್ಕೆ ಆಗ್ರಹಿಸಲಿದ್ದೇವೆ. ಪಿಎಸ್‌ಐ ಅವರ ಮೇಲೆ ಕ್ರಮವಾಗದ ಹೊರತು ಹೋರಾಟ ನಿಲ್ಲುವದಿಲ್ಲ. ಈ ಹೋರಾಟಕ್ಕೆ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರು ನ.6 ಅಥವಾ 7ರಂದು ಪಾಲ್ಗೊಂಡು ಬೆಂಬಲ ಸೂಚಿಸಲಿದ್ದಾರೆ. ನ.10ಕ್ಕೆ ಶ್ರೀ ರಾಮ ಸೇನಾ ರಾಜ್ಯಾದ್ಯಕ್ಷ ಗಂಗಾಧರ ಕುಲಕರ್ಣಿ ಅವರ ಆಗಮಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀರಾಮಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಪ್ರವೀಣ ಕುಂಬಾರ, ಚಂದ್ರು ಕರ್ಜೇಕಣ್ಣವರ, ಮಂಜು ಕೋಡಳ್ಳಿ, ಬಾಳಪ್ಪ ಗೋಸಾವಿ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img