ಬೆಂಗಳೂರು: ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಆರು ತಿಂಗಳು ಕಳೆದ ಬಳಿಕ ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಡಿಜಿಟಲ್ ವೇದಿಕೆಗೆ ಕಾಲಿಡಲು ಸಜ್ಜಾಗಿದೆ. ಚಿತ್ರದ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಜೀ5 ಪಡೆದುಕೊಂಡಿದ್ದು, ಶೀಘ್ರದಲ್ಲೇ ಸಿನಿಮಾ ಪ್ರೇಕ್ಷಕರ ಮನೆಮನೆ ತಲುಪಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ದರ್ಶನ್ ಜೈಲಿನಲ್ಲಿದ್ದಾಗಲೇ ‘ಡೆವಿಲ್’ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದ ಪ್ರಚಾರ ಜವಾಬ್ದಾರಿಯನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತರು ಹೊತ್ತುಕೊಂಡಿದ್ದರು. ನಿರೀಕ್ಷಿತ ಮಟ್ಟದ ಯಶಸ್ಸು ಸಿಗದಿದ್ದರೂ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು.
ಜೀ5 ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಆಗಮನದ ಕುರಿತು ಸುಳಿವು ನೀಡಿದ್ದು, ದರ್ಶನ್ ಅವರ ಜನಪ್ರಿಯ ಸಂಭಾಷಣೆಯನ್ನು ಬಳಸಿ ಪ್ರಚಾರ ಆರಂಭಿಸಿದೆ. ಇದರಿಂದ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ.
ಚಿತ್ರದ ನಿರ್ಮಾಣ ಹಂತದಲ್ಲೇ ದರ್ಶನ್ ಬಂಧನವಾಗಿದ್ದರಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ನಂತರ ಹೈಕೋರ್ಟ್ ನೀಡಿದ ಜಾಮೀನಿನ ಅವಧಿಯಲ್ಲಿ ಅವರು ಉಳಿದ ಕೆಲಸಗಳನ್ನು ಪೂರ್ಣಗೊಳಿಸಿದ್ದರು. ಬಳಿಕ ಜಾಮೀನು ರದ್ದಾದ ಹಿನ್ನೆಲೆ ಮತ್ತೆ ಜೈಲು ಸೇರಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಿಡುಗಡೆಯಾದ ‘ಡೆವಿಲ್’ ಇದೀಗ ಒಟಿಟಿ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದೆ.
ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದು, ದರ್ಶನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.



