ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮತ್ತೆ ಆರಂಭವಾಗಿದ್ದು, ಮುಂದಿನ ಮೂರು ಗಂಟೆಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ನಗರದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಹಗಲಿನ ವೇಳೆಯಲ್ಲೇ ಕತ್ತಲೆ ಆವರಿಸಿದಂತ ವಾತಾವರಣ ಕಂಡುಬಂದಿದೆ. ಹವಾಮಾನ ಇಲಾಖೆಯ ಎಚ್ಚರಿಕೆಯಂತೆ, ಮುಂದಿನ ಕೆಲ ಗಂಟೆಗಳವರೆಗೆ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಈಗಾಗಲೇ ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೊರೇಷನ್ ಸುತ್ತಮುತ್ತ ಮಳೆ ಆರಂಭವಾಗಿದ್ದು, ಪ್ಯಾಲೆಸ್ ಗ್ರೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಕೆಲವೆಡೆ ವಾಹನ ಸಂಚಾರ ನಿಧಾನಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆಯಿದೆ.
ಹವಾಮಾನ ಇಲಾಖೆಯ ಪ್ರಕಾರ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಮರಗಳ ಕೆಳಗೆ ನಿಲ್ಲುವುದು, ಅಗತ್ಯವಿಲ್ಲದಿದ್ದರೆ ಹೊರಗಡೆ ಸಂಚರಿಸುವುದನ್ನು ತಪ್ಪಿಸುವುದು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸಲಹೆ ನೀಡಲಾಗಿದೆ.



