ಗದಗ: ಕಳೆದ ಸುಮಾರು 12 ವರ್ಷಗಳಿಂದ ಮನೆಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಅದೇ ಮನೆಯ ಚಿನ್ನಾಭರಣ ಕಳವು ಮಾಡಿರುವ ಪ್ರಕರಣವನ್ನು ಮುಂಡರಗಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ.
ಪ್ರಕರಣ ದಾಖಲಾದ ಕೇವಲ 8 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿದ ಮುಂಡರಗಿ ಪೊಲೀಸರು, 21 ಗಂಟೆಗಳೊಳಗೆ ₹14.80 ಲಕ್ಷ ಮೌಲ್ಯದ 185 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಂಡರಗಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 26ರಂದು ಮನೆಕಳ್ಳತನ ಪ್ರಕರಣ ದಾಖಲಾಗಿತ್ತು. ಅನ್ನದಾನೇಶ್ವರ ನಗರದ ನಿವಾಸಿ ಹಾಗೂ ಶಿಕ್ಷಣ ಇಲಾಖೆಯ ಎಫ್‌ಡಿಎ ಆಗಿರುವ ವಸಂತ ಮೊರಬ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮುಂಡರಗಿ ಪೊಲೀಸರು ತನಿಖೆ ಆರಂಭಿಸಿದ್ದರು.
ಪ್ರಕರಣದ ಆರೋಪಿ ಹಾಗೂ ಕಳುವಾದ ಮಾಲು ಪತ್ತೆಗಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ಸೂಚನೆಯಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಯ್ಯನಗೌಡ ವಿ. ಪಾಟೀಲ, ಪಿಎಸ್‌ಐ ಬಿ.ಎನ್. ಯಳವತ್ತಿ ಹಾಗೂ ಅಪರಾಧ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
8 ಗಂಟೆಯಲ್ಲಿ ಆರೋಪಿ ಪತ್ತೆ:
ತನಿಖೆ ವೇಳೆ ಪ್ರಕರಣದ ಆರೋಪಿಯಾಗಿರುವ ಲಲಿತಾ, ಪತಿ ಈರಪ್ಪ ಗೊಂಡಬಾಳ (47), ಎ.ಡಿ. ನಗರ, ಮುಂಡರಗಿ ಅವರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಆರೋಪಿತ ಮಹಿಳೆ ಕೃತ್ಯ ಎಸಗಿರುವ ಕುರಿತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು, ಪ್ರಕರಣ ದಾಖಲಾಗಿದ ಕೇವಲ 8 ಗಂಟೆಗಳಲ್ಲಿಯೇ ಆಕೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಆರೋಪಿತೆಯಿಂದ ಕಳವು ಮಾಡಿದ್ದ 185 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ಮೌಲ್ಯ ₹14.80 ಲಕ್ಷ ಎಂದು ಅಂದಾಜಿಸಲಾಗಿದೆ.
ಪ್ರಕರಣದ ವಿಶೇಷವೆಂದರೆ, ಬಂಧಿತ ಮಹಿಳೆ ಕಳೆದ ಸುಮಾರು 12 ವರ್ಷಗಳಿಂದ ದೂರುದಾರರ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದಳು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಕರಣವನ್ನು ತ್ವರಿತವಾಗಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಡಿ.ಕೆ., ಮುಂಡರಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಯ್ಯನಗೌಡ ವಿ. ಪಾಟೀಲ, ಪಿಎಸ್‌ಐ ಬಿ.ಎನ್. ಯಳವತ್ತಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜೆ.ಐ. ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಗಂಗಾಧರ ಮಜ್ಜಗಿ, ಎಚ್.ಕೆ. ನದಾಫ್, ಶರಣಪ್ಪ ಓಜನಹಳ್ಳಿ, ಭಾಗ್ಯ ಪತ್ತಾರ, ಎಂ.ಎ. ಕೊಟಗಿ ಮತ್ತು ಜಿ.ಎಫ್. ಉಪ್ಪಾರ ಅವರು ಶ್ರಮಿಸಿದ್ದಾರೆ.
ಪ್ರಕರಣವನ್ನು ತ್ವರಿತವಾಗಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪ್ರಶಂಸಿಸಿ, ಸೂಕ್ತ ಬಹುಮಾನ ಘೋಷಿಸಿದ್ದಾರೆ.



