ವಿಜಯಸಾಕ್ಷಿ ಸುದ್ದಿ, ಗದಗ: ಅಕ್ಷರವೆಂಬುದು ಕೇವಲ ಜ್ಞಾನವಲ್ಲ, ಅದು ಬದುಕನ್ನು ಬದಲಿಸುವ ಶಕ್ತಿ. ಒಬ್ಬ ವ್ಯಕ್ತಿಗೆ ಅಕ್ಷರ ಕಲಿಸಿದರೆ ಒಂದು ಕುಟುಂಬಕ್ಕೆ ಬೆಳಕು ನೀಡಿದಂತೆ, ಒಂದು ಸಮಾಜವನ್ನು ಸಾಕ್ಷರಗೊಳಿಸಿದರೆ ಇಡೀ ರಾಷ್ಟ್ರಕ್ಕೆ ಬೆಳಕು ನೀಡಿದಂತೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಹೇಳಿದರು.
ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ 60ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಾಕ್ಷರತೆಯು ವ್ಯಕ್ತಿಯ ವೈಯಕ್ತಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಜತೆಗೆ ಸಾಮಾಜಿಕ ಜಾಗೃತಿ, ಪ್ರಜಾಪ್ರಭುತ್ವದ ಬಲವರ್ಧನೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ. ಜಿಲ್ಲೆಯನ್ನು ಸಂಪೂರ್ಣ ಸಾಕ್ಷರಗೊಳಿಸಲು ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಸ್.ಎಸ್. ಕುರಿಯವರ ಅವರು ಗಣ್ಯರನ್ನು ಸ್ವಾಗತಿಸಿ, ದೇಶ, ರಾಜ್ಯ ಹಾಗೂ ಜಿಲ್ಲೆಯ ಸಾಕ್ಷರತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶದ ನಿಜವಾದ ಅಭಿವೃದ್ಧಿಯನ್ನು ಅಳೆಯಲು ಆರ್ಥಿಕ ಪ್ರಗತಿಯ ಜತೆಗೆ ಜನರ ಶಿಕ್ಷಣ ಮತ್ತು ಸಾಕ್ಷರತೆಯ ಮಟ್ಟವೂ ಪ್ರಮುಖ ಮಾನದಂಡವಾಗಿದೆ. ಸಾಕ್ಷರತೆ ಹೆಚ್ಚಾದಂತೆ ದೇಶದ ಅಭಿವೃದ್ಧಿಯೂ ವೇಗ ಪಡೆಯುತ್ತದೆ ಎಂದರು.
ಸಾಕ್ಷರ ವ್ಯಕ್ತಿ ಉತ್ತಮ ಉದ್ಯೋಗ ಪಡೆಯಲು ಪ್ರಯತ್ನಿಸುವುದರ ಜತೆಗೆ ಆರೋಗ್ಯದ ಬಗ್ಗೆ ಜಾಗೃತನಾಗುತ್ತಾನೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾನೆ ಹಾಗೂ ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಹೀಗಾಗಿ ಸಾಕ್ಷರತೆ ದೇಶದ ಮಾನವ ಸಂಪನ್ಮೂಲವನ್ನು ಬಲಪಡಿಸುತ್ತದೆ. ಜ್ಞಾನ ಹೊಂದಿರುವ ನಾಗರಿಕರೇ ದೇಶದ ದೊಡ್ಡ ಸಂಪತ್ತು. ಸಾಕ್ಷರತೆ ಕೇವಲ ಸರ್ಕಾರಿ ಯೋಜನೆಯಲ್ಲ, ಸಾಮಾಜಿಕ ಚಳವಳಿಯಾಗಿದೆ ಎಂದು ಹೇಳಿದರು.
ಕನಿಷ್ಠ ಒಬ್ಬ ಅನಕ್ಷರಸ್ಥ ವ್ಯಕ್ತಿಗೆ ಓದಲು ಮತ್ತು ಬರೆಯಲು ಕಲಿಸುವ ಸಂಕಲ್ಪ ಮಾಡಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಸಹಯೋಗದೊಂದಿಗೆ ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಾಕ್ಷರತಾ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ಡಿ. ಬಡಿಗೇರ, ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಕ್ಷೇತ್ರ ಸಮನ್ವಯಾಧಿಕಾರಿ ಜೆ.ಎ. ಬಾವಿಕಟ್ಟಿ, ಎಸ್.ಆರ್. ನದಾಫ್, ಎಸ್.ಬಿ. ಬನ್ನಿಕಲ್, ಕೆ.ಎ. ಹುಲಗೇರಿ, ಜಿ.ಡಿ. ದಾಸರ, ಎಸ್.ವೈ. ವಿಬೂತಿ ಸೇರಿದಂತೆ ಗದಗ ಗ್ರಾಮೀಣ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
ಶಾಸ್ತ್ರಿಜಿ ಬಿ.ಎಡ್. ಕಾಲೇಜಿನ ಉಪನ್ಯಾಸಕ ರಾಜು ಕೇರೂರ ಹಾಗೂ ಪ್ರಶಿಕ್ಷಣಾರ್ಥಿಗಳು, ಯುವ ಸಬಲೀಕರಣ ಇಲಾಖೆಯ ವಿದ್ಯಾರ್ಥಿಗಳು ಮತ್ತು ಸಾಕ್ಷರತಾ ಕಾರ್ಯಕ್ರಮಗಳ ಬೋಧಕರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರಗು ತಂದರು.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ಸಾಕ್ಷರತಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬಿತ್ತಿಪತ್ರಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಇತರರು ಅನಾವರಣಗೊಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕ ಅಶೋಕ ಹಾದಿ ಮಾಡಿದರು. ದೈಹಿಕ ಶಿಕ್ಷಕ ಎಸ್. ಮುಳಗುಂದ ಅವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೆ.ವೈ. ವಿಬೂತಿ ವಂದನಾರ್ಪಣೆ ಮಾಡಿದರು.
ಸಾಕ್ಷರತೆ ಕೇವಲ ಸರ್ಕಾರಿ ಯೋಜನೆಯಲ್ಲ; ಅದು ಸಾಮಾಜಿಕ ಚಳವಳಿಯಾಗಿದೆ. ಕನಿಷ್ಠ ಒಬ್ಬ ಅನಕ್ಷರಸ್ಥ ವ್ಯಕ್ತಿಗೆ ಓದಲು ಮತ್ತು ಬರೆಯಲು ಕಲಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು.
— ಎಸ್.ಎಸ್. ಕುರಿಯವರ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಗದಗ



