ಬೀದರ್: ಸಿಡಿಲು ಬಡಿದು ಇಬ್ಬರು ಯುವ ರೈತರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ನಾವದಗಿ ಗ್ರಾಮದ ರೇವಣಸಿದ್ದ (28) ಹಾಗೂ ಜೇವರ್ಗಿಯ ಯಲ್ಲಾಲಿಂಗ (28) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಆರಂಭವಾದ ಹಿನ್ನೆಲೆ, ಇಬ್ಬರು ಮಾವಿನ ಮರದ ಕೆಳಗೆ ನಿಂತಿದ್ದರು.
ಈ ವೇಳೆ ಆ ಮರಕ್ಕೆ ಸಿಡಿಲು ಅಪ್ಪಳಿಸಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದು ಖಟಕ್ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಖಟಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



