ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ ಸವಿ ನೆನಪಿನ ಅಂಗವಾಗಿ ಹಾಗೂ ವಿಬಿ-ಜಿ ರಾಮ್ (ಜಿ) ಯೋಜನೆ ಆರಂಭದ ಹಿನ್ನೆಲೆಯಲ್ಲಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಘಟಕವು ನಗರದ ಆರ್‌ಡಿಪಿಆರ್ ವಿಶ್ವವಿದ್ಯಾಲಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಿ 100ಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ನೆಟ್ಟಿತು.
ಸಂಘದ ಗೌರವಾಧ್ಯಕ್ಷ ಸಿದ್ದಲಿಂಗೇಶ ಪಾಟೀಲ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಮರವಾಗಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಅಧ್ಯಕ್ಷ ಸುರೇಶ ಬಾಳಿಕಾಯಿ ಮಾತನಾಡಿ, ನರೇಗಾ ಯೋಜನೆಯು ಗ್ರಾಮೀಣಾಭಿವೃದ್ಧಿ, ಜಲ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಹೊಸದಾಗಿ ಆರಂಭವಾಗುತ್ತಿರುವ ವಿಬಿ-ಜಿ ರಾಮ್ (ಜಿ) ಯೋಜನೆಯೂ ಗ್ರಾಮೀಣ ಅಭಿವೃದ್ಧಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು 100ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಮಾಡುವ ಪ್ರತಿಜ್ಞೆ ಕೈಗೊಂಡರು. ಹೊಸ ಜಿಲ್ಲಾ ಪದಾಧಿಕಾರಿಗಳ ನೇಮಕದ ಬಳಿಕ ನಡೆದ ಮೊದಲ ಸಂಘಟನಾ ಕಾರ್ಯಕ್ರಮ ಇದಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನರೇಗಾ ನೌಕರರು ಭಾಗವಹಿಸಿದರು.
ಇದೇ ವೇಳೆ ನೌಕರರ ಹಿತಾಸಕ್ತಿ, ಸಂಘಟನೆಯ ಬಲವರ್ಧನೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಯಿತು. ಭವಿಷ್ಯದಲ್ಲಿಯೂ ಜಿಲ್ಲೆಯಾದ್ಯಂತ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಘ ನಿರ್ಧರಿಸಿದೆ.
“ನರೇಗಾ ಯೋಜನೆಯು ಗ್ರಾಮೀಣ ಅಭಿವೃದ್ಧಿ, ಜಲ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದೆ. ಹೊಸದಾಗಿ ಆರಂಭವಾಗಿರುವ ವಿಬಿ-ಜಿ ರಾಮ್ (ಜಿ) ಯೋಜನೆಯು ಗ್ರಾಮೀಣಾಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ನೆಟ್ಟ ಪ್ರತಿಯೊಂದು ಸಸಿಯನ್ನೂ ಮರವಾಗಿ ಬೆಳೆಸುವ ಸಂಕಲ್ಪ ಮಾಡಬೇಕು.”
– ಸುರೇಶ ಬಾಳಿಕಾಯಿ, ಜಿಲ್ಲಾಧ್ಯಕ್ಷರು, ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಗದಗ ಜಿಲ್ಲೆ



