ಪತ್ರಿಕಾರಂಗದ ಸವಾಲುಗಳ ನಡುವೆಯೂ ದಶಕ ಪೂರೈಸಿದ ‘ವೇರಿ ಗುಡ್ ಮಾರ್ನಿಂಗ್’ : ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಂತ್ರಿಕತೆಯ ವೇಗದ ನಡುವೆ ಪತ್ರಿಕಾರಂಗ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೂ ‘ವೇರಿ ಗುಡ್ ಮಾರ್ನಿಂಗ್’ ಕನ್ನಡ ದಿನಪತ್ರಿಕೆ ಹತ್ತು ವರ್ಷಗಳಿಂದ ಜನಪರ ಹಾಗೂ ಸಾಮಾಜಿಕ ಕಾಳಜಿಯೊಂದಿಗೆ ನಿರಂತರವಾಗಿ ಪತ್ರಿಕಾ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

Advertisement

ನಗರದ ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಗೌತಮ ಬುದ್ಧ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ವಾಯ್ಸ್ ಆಫ್ ಗದಗ ಸೀಸನ್-2’ ಕನ್ನಡ ಚಲನಚಿತ್ರ ಗೀತೆಗಳ ರಾಜ್ಯಮಟ್ಟದ ಸ್ಪರ್ಧೆ ಹಾಗೂ ‘ವೇರಿ ಗುಡ್ ಮಾರ್ನಿಂಗ್’ ದಿನಪತ್ರಿಕೆಯ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಹಾಗೂ ಡಿಜಿಟಲ್ ಮಾಧ್ಯಮಗಳ ಪ್ರಾಬಲ್ಯದ ನಡುವೆಯೂ ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಜನರಿಗೆ ತಲುಪಿಸುವ ಮೂಲಕ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಲೋಪಗಳನ್ನು ತಿದ್ದಿ ಸಮಾಜವನ್ನು ಎಚ್ಚರಿಸುವ ಗುರುತರ ಜವಾಬ್ದಾರಿ ಪತ್ರಿಕಾರಂಗಕ್ಕಿದ್ದು, ಸಂಪಾದಕ ದೇವಪ್ಪ ಎನ್. ಲಿಂಗದಾಳ ಅವರ ನೇತೃತ್ವದಲ್ಲಿ ‘ವೇರಿ ಗುಡ್ ಮಾರ್ನಿಂಗ್’ ಆ ಕಾರ್ಯ ಮಾಡುತ್ತಿದೆ ಎಂದರು.

ಪತ್ರಕರ್ತ ಅನಂತ ಕಾರ್ಕಳ ಮಾತನಾಡಿ, ಹಲವು ಸವಾಲುಗಳ ನಡುವೆಯೂ ‘ವೇರಿ ಗುಡ್ ಮಾರ್ನಿಂಗ್’ ಹತ್ತು ವರ್ಷಗಳ ಪಯಣ ಪೂರ್ಣಗೊಳಿಸಿರುವುದು ಸಂಪಾದಕ ದೇವಪ್ಪ ಎನ್. ಲಿಂಗದಾಳ ಹಾಗೂ ಸಿದ್ದಪ್ಪ ಎನ್. ಲಿಂಗದಾಳ ಅವರ ಪರಿಶ್ರಮದ ಫಲವಾಗಿದೆ. ಪತ್ರಿಕೆ ಜನಪ್ರಿಯವಾಗಿ ಹೊರಹೊಮ್ಮಲು ಅವರ ನಿರಂತರ ಶ್ರಮ ಕಾರಣ. ಪತ್ರಿಕೆಯ ಆರಂಭದ ದಿನಗಳಿಂದಲೂ ತಮ್ಮಿಂದಾದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುತ್ತಿದ್ದು, ಮುಂದೆಯೂ ಪತ್ರಿಕೆ ಶತಮಾನೋತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.

ದಶಮಾನೋತ್ಸವ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಕಿತ್ತೂರು ಕರ್ನಾಟಕ ದಿನಪತ್ರಿಕೆ ಸಂಪಾದಕ ಮಂಜುನಾಥ ಅಬ್ಬಿಗೇರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಿಕೆಗಳ ಸಂಪಾದಕರು ಒಗ್ಗಟ್ಟಾಗಿ ಸರ್ಕಾರ ಹಾಗೂ ವಾರ್ತಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ನ್ಯಾಯಯುತವಾಗಿ ಪಡೆಯಲು ಸಂಘಟಿತ ಪ್ರಯತ್ನ ನಡೆಸಬೇಕು ಎಂದು ಕರೆ ನೀಡಿದರು.

ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕಾರಂಗ ಪ್ರಮುಖ ಪಾತ್ರ ವಹಿಸುತ್ತಿದ್ದು, ‘ವೇರಿ ಗುಡ್ ಮಾರ್ನಿಂಗ್’ ಶೋಷಿತ ಸಮುದಾಯದ ಸಮಸ್ಯೆಗಳಿಗೆ ಧ್ವನಿಯಾಗುತ್ತಿರುವುದು ಪ್ರಶಂಸನೀಯ ಎಂದರು.

‘ರತ್ನಾಕರವಾಣಿ’ ಸಂಪಾದಕ ಜಗದೀಶ ಪೂಜಾರ ಮಾತನಾಡಿ, ‘ವೇರಿ ಗುಡ್ ಮಾರ್ನಿಂಗ್’ ಸಂಪಾದಕರು ಸ್ವಾಭಿಮಾನದಿಂದ ತಮ್ಮ ಕಾರ್ಯವನ್ನು ಮುಂದುವರಿಸುತ್ತಿದ್ದು, ಮಾತಿಗಿಂತ ಕಾಯಕದ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಯ್ಸ್ ಆಫ್ ಗದಗ: ನಾಗರಾಜ ಹುಣಸಿಕಟ್ಟಿ ಪ್ರಥಮ

ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ನಾಗರಾಜ ಹುಣಸಿಕಟ್ಟಿ ಪ್ರಥಮ, ಕೀರ್ತನಾ ಜರತಾರೆ ದ್ವಿತೀಯ, ಶ್ರೇಯಾ ರಂಗರೇಜ ತೃತೀಯ ಹಾಗೂ ಜಯಶ್ರೀ ರಾಜೋಳಿ ಚತುರ್ಥ ಸ್ಥಾನ ಪಡೆದರು.

ಸಂಪಾದಕ ದೇವಪ್ಪ ಎನ್. ಲಿಂಗದಾಳ ಅಧ್ಯಕ್ಷತೆ ವಹಿಸಿದ್ದರು. ಸಿದ್ದಪ್ಪ ಎನ್. ಲಿಂಗದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ರಾಜಕರಣ್ ನಿರೂಪಿಸಿದರು. ಮಂಜುನಾಥ ಲಿಂಗದಾಳ ಸ್ವಾಗತಿಸಿದರು. ಬಲರಾಜ ಅರಬರ ವಂದಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪತ್ರಕರ್ತ ಆನಂದ ಸಾಲಿಗ್ರಾಮ, ‘ನಾಗರಿಕ’ ಸಂಪಾದಕ ಅಜೀತ್ ಹೊಂಬಾಳಿ, ‘ಚಕ್ರವರ್ತಿ’ ಪತ್ರಿಕೆ ಸಂಪಾದಕ ಎಸ್.ಆರ್. ಬಾಂಡಗೆ, ‘ಸೂಪರ್ ವಾಣಿ’ ಸಂಪಾದಕ ಮಹಾಂತೇಶ ಮದ್ನೂರ, ದಲಿತ ಯುವ ಸೇನಾ ಸಮಿತಿ ಅಧ್ಯಕ್ಷ ವಿಜಯ್ ಎಸ್. ಮುಳಗುಂದ, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಸವರಾಜ ಕಡೇಮನಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರಾಜೇಂದ್ರ ಗಡಾದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಎಸ್.ಎನ್. ಬಳ್ಳಾರಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ ಚವ್ಹಾಣ, ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ, ಮುಖಂಡ ಸತೀಶ್ ಎಚ್. ಹೂಲಿ, ಪ್ರೊ. ಮಲ್ಲೇಶ ಹೊಸೂರ, ರವಿ ಎಲ್. ಗುಂಜೀಕರ, ಮಲ್ಲಿಕಾರ್ಜುನ ಕಲಕಂಬಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಪತ್ರಿಕಾರಂಗ ಹಲವು ಸವಾಲುಗಳ ನಡುವೆಯೂ ‘ವೇರಿ ಗುಡ್ ಮಾರ್ನಿಂಗ್’ ಹತ್ತು ವರ್ಷಗಳಿಂದ ಜನಪರವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಪತ್ರಿಕೆ ಇನ್ನಷ್ಟು ಅಭಿವೃದ್ಧಿ ಹೊಂದಿ ಸಾಮಾಜಿಕ ಸೇವೆಯಲ್ಲಿ ಅವಿರತವಾಗಿ ತೊಡಗಲಿ.

— ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ

LEAVE A REPLY

Please enter your comment!
Please enter your name here