ವಿಜಯಸಾಕ್ಷಿ ಸುದ್ದಿ, ಗದಗ: ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕು. ರೀತ್ ಸಚಿನ್ ಜೈನ್ ಅವರು ಕಂಪನಿ ಕಾರ್ಯದರ್ಶಿ (ಸಿಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 7ನೇ ರ‍್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಆದರ್ಶ ಶಿಕ್ಷಣ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಿಎಸ್ ಪರೀಕ್ಷೆಯಲ್ಲಿ ದೇಶಕ್ಕೆ 7ನೇ ರ‍್ಯಾಂಕ್ ಗಳಿಸಿದ ಕು. ರೀತ್ ಸಚಿನ್ ಜೈನ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಆದರ್ಶ ಶಿಕ್ಷಣ ಸಮಿತಿ ಕ್ಯಾಂಪಸ್‌ನಲ್ಲಿಯೇ ತಮ್ಮ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿರುವ ರೀತ್ ಜೈನ್ ಅವರ ಸಾಧನೆಯನ್ನು ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಬೋಧಕ ವೃಂದದವರು ಕೊಂಡಾಡಿದರು. ಜೈನ್ ಕುಟುಂಬಕ್ಕೂ ಸಂಸ್ಥೆಗೂ ಇರುವ ದೀರ್ಘಕಾಲದ ಸಂಬಂಧವನ್ನು ಸ್ಮರಿಸಿದ ಹಲವಾರು ಬೋಧಕ ವೃಂದದ ಸದಸ್ಯರು, ರೀತ್ ಜೈನ್ ಅವರ ಶೈಕ್ಷಣಿಕ ಸಾಧನೆ ಹಾಗೂ ಪರಿಶ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪಿ.ಆರ್. ಅಡವಿಯವರು ಮಾತನಾಡಿ, ಜೈನ್ ಕುಟುಂಬದ ಶೈಕ್ಷಣಿಕ ಸಾಧನೆ ಹಾಗೂ ಸಂಸ್ಥೆಯೊಂದಿಗಿನ ಅವರ ನಂಟನ್ನು ಸ್ಮರಿಸುತ್ತಾ ರೀತ್ ಜೈನ್ ಅವರ ಸಾಧನೆಯನ್ನು ಶ್ಲಾಘಿಸಿದರು.
ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ರವೀಂದ್ರಕುಮಾರ ಕುಲಕರ್ಣಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿ.ಟಿ. ನಾಯ್ಕರ್ ಹಾಗೂ ಪ್ರೊ. ಶ್ರೀಮತಿ ಅಕ್ಷತಾ ಎಳ್ಳೂರು ಅವರು ರೀತ್ ಜೈನ್ ಅವರ ಕಠಿಣ ಪರಿಶ್ರಮ, ಶೈಕ್ಷಣಿಕ ಬದ್ಧತೆ ಹಾಗೂ ಸಾಧನೆಯನ್ನು ಮೆಚ್ಚಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ವಿ. ಕುಷ್ಟಗಿ ಅವರು ಕು. ರೀತ್ ಜೈನ್ ಅವರನ್ನು ಅಭಿನಂದಿಸಿ, ಅವರ ವೃತ್ತಿಪರ ಜೀವನದಲ್ಲಿಯೂ ಯಶಸ್ಸು ಮುಂದುವರಿಯಲಿ ಎಂದು ಹಾರೈಸಿದರು. ಶಿಕ್ಷಕರ ದಿನದ ಅಂಗವಾಗಿ ಬೋಧಕ ಸಿಬ್ಬಂದಿಗೆ ಶುಭಾಶಯಗಳನ್ನು ಸಲ್ಲಿಸಿದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀ ಎ.ಡಿ. ಗೊಡಖಿಂಡಿ ಅವರು ರೀತ್ ಜೈನ್ ಹಾಗೂ ಅವರ ಕುಟುಂಬದೊಂದಿಗಿನ ತಮ್ಮ ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡು, ಅವರ ಗಮನಾರ್ಹ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು.
ಶಿಕ್ಷಕರ ಪ್ರೋತ್ಸಾಹವೇ ಯಶಸ್ಸಿನ ಬಲ
ಸನ್ಮಾನ ಸ್ವೀಕರಿಸಿ ಮಾತನಾಡಿದ ಕು. ರೀತ್ ಜೈನ್ ಅವರು ತಮ್ಮ ಕಾಲೇಜು ದಿನಗಳ ಅನುಭವಗಳು ಹಾಗೂ ನೆನಪುಗಳನ್ನು ಹಂಚಿಕೊಂಡರು. ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದ ಬೋಧಕ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಶಿಕ್ಷಕರಿಂದ ದೊರೆತ ಪ್ರೇರಣೆ ಹಾಗೂ ಬೆಂಬಲ ತಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ತಮ್ಮ ಸಾಧನೆಗೆ ಸಹಕರಿಸಿದ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದರು.
ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಎಲ್. ಪೋತ್ನಿಸ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಿ.ಎ., ಸಿ.ಎಸ್. ಸೇರಿದಂತೆ ವಿವಿಧ ಶೈಕ್ಷಣಿಕ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಸಂಸ್ಥೆಗೆ ಸಂತಸ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಶ್ರೀ ಶೈಲೇಶ್ ಬಾಗ್ಮಾರ್, ಶ್ರೀ ಎ.ವೈ. ಇಂಚಲ, ಮೂರು ಅಂಗಸಂಸ್ಥೆಗಳ ಪ್ರಾಚಾರ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



