`ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಹೆಜ್ಜೆಯಿಟ್ಟ ಶಿವ-ಗಂಗಾ’

0
Spread the love

ಹೊಸ ಅತಿಥಿಗಳ ಗತ್ತು-ಗೈರತ್ತು ನೋಡಿ ನಿಬ್ಬೆರಗಾದ ಪುಟಾಣಿಗಳು

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಅವಳಿ ನಗರದಲ್ಲಿ ಗುರುವಾರ ಸಂಭ್ರಮ-ಸಡಗರ ಮನೆಮಾಡಿ, ಎಲ್ಲೆಲ್ಲೂ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಸಿಬ್ಬಂದಿಗಳು ರಾಜರ ಸ್ವಾಗತಕ್ಕೆ ಹಸಿರು ಕಾರ್ಪೆಟ್ ಹಾಕಿ, ತಳಿರು- ತೋರಣ, ಹೂವುಗಳಿಂದ ಸಿಂಗಾರ ಮಾಡಿದ್ದರು. ರಂಗೋಲಿ ಚಿತ್ತಾರದ ಮೂಲಕ ಕಾಡಿನ ರಾಜರ ಸ್ವಾಗತಕ್ಕೆ ಭರ್ಜರಿ ತಯಾರಿಯನ್ನೇ ಮಾಡಲಾಗಿತ್ತು. ಘರ್ಜಿಸುವ ಮೂಲಕವೇ ಅವಳಿ ನಗರಕ್ಕೆ ಕಾಲಿಟ್ಟ ರಾಜ-ರಾಣಿಯ ಗತ್ತು-ಗಾಂಭೀರ್ಯ ಜೋರಾಗಿಯೇ ಇತ್ತೆನ್ನಿ. ಪುಟಾಣಿ ಮಕ್ಕಳಂತೂ ದೂರದಿಂದ ಗದುಗಿಗೆ ಬಂದ ಈ ಅಪರೂಪದ ರಾಜ-ರಾಣಿಯರನ್ನು ನೋಡಿ ಕಣ್ತುಂಬಿಕೊಂಡು, ಘರ್ಜನೆ ಕೇಳಿ ಖುಷಿ ಪಟ್ಟರು.

ಅಂದಹಾಗೆ, ಈಗ ಹೇಳುತ್ತಿರುವುದು, ಕಾಡಿನ ರಾಜ-ರಾಣಿಯರ ಬಗ್ಗೆ! ಮಧ್ಯಪ್ರದೇಶದ ಇಂಧೋರ್‌ನ ಕಮಲಾ ನೆಹರೂ ಪ್ರಾಣಿಸಂಗ್ರಹಾಲಯದಿಂದ ಬಿಂಕದಕಟ್ಟಿ ಪ್ರಾಣಿಸಂಗ್ರಹಾಲಯಕ್ಕೆ ಬಂದಿಳಿದ ಎರಡು ಸಿಂಹಗಳು ಪ್ರಾಣಿಪ್ರಿಯರಿಗೆ, ಪ್ರವಾಸಿಗರನ್ನು ಪ್ರಾಣಿಸಂಗ್ರಹಾಲಯದತ್ತ ಆಕರ್ಷಿಸುತ್ತಿವೆ. ಹೀಗಾಗಿ, ಗದಗ-ಬೆಟಗೇರಿಯ ಬಯಲು ಸೀಮೆ ನಾಡಿನ ಜನರಿಗೆ ಈಗ ಸಿಂಹಗಳನ್ನೂ ನೋಡುವ ಭಾಗ್ಯ ಸಿಕ್ಕಂತಾಗಿದೆ.

ಮೂರುವರೆ ವರ್ಷದ ಗಂಡು ಸಿಂಹ ಶಿವ, ಎರಡೂವರೆ ವರ್ಷದ ಹೆಣ್ಣು ಸಿಂಹ ಗಂಗಾ ಗದಗ ಝೂ ಪ್ರವೇಶಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಹುಲಿ, ಸಿಂಹಗಳೂ ಸೇರಿ ಕಾಡು ಪ್ರಾಣಿಗಳನ್ನು ನೋಡುವ ಭಾಗ್ಯ ಕಡಿಮೆಯೇ. ಈಗ ಎರಡು ಹೊಸ ಸಿಂಹಗಳ ಆಗಮನದಿಂದ ಈ ಭಾಗದ ಜನರು ಹೊಸಬರ ದರ್ಶನವನ್ನೂ ಮಾಡುವಂತಾಗಿದೆ.

ಬಿಂಕದಕಟ್ಟಿಗೆ ಆಗಮಿಸಿದ ಸಿಂಹಗಳು ಏಶಿಯಾಟಿಕ್ ತಳಿ ಸಿಂಹಗಳಾಗಿದ್ದು, ಗದಗ ಕಪಿಲ್ ಹಾಗೂ ಕಸ್ತೂರಿ ಹೆಸರಿನ ಎರಡು ತೋಳಗಳನ್ನು ಕೊಟ್ಟು, ಈ ಎರಡು ಸಿಂಹಗಳನ್ನು ವಿನಿಮಯ ಮಾಡಿ ತರಲಾಗಿದೆ. ಮೃಗಾಲಯದಲ್ಲಿ ಈಗಾಗಲೇ ವಯಸ್ಸಾದ ಅರ್ಜು, ಧರ್ಮ ಎಂಬ ಎರಡು ಸಿಂಹಗಳಿದ್ದು, ಇವುಗಳಿಗೆ ಸಾಥ್ ನೀಡಲು ಮತ್ತೆರಡು ಸಿಂಹಗಳು ಆಗಮಿಸಿವೆ. ಸಿಂಹಗಳನ್ನು ಗುಹೆಯಿಂದ ಹೊರಬಿಡುವ ಮೂಲಕ ಗದಗ ಶಾಸಕ ಎಚ್.ಕೆ. ಪಾಟೀಲ್ ಸಾರ್ವಜನಿಕ ವೀಕ್ಷಣೆಗೆ ನಿಶಾನೆ ತೋರಿಸಿದರು.

ಗದಗನ ಬಿಂಕದಕಟ್ಟ ಪ್ರಾಣಿ ಸಂಗ್ರಹಾಲಯ ರಜತ ಮಹೋತ್ಸವ ಆಚರಣೆಗೆ ಸಜ್ಜಾಗಿದೆ. ಮೈಸೂರು ಮೃಗಾಲಯದ ನಂತರ ದೊಡ್ಡದಾಗಿ ಬೆಳೆದ ಪ್ರಾಣಿಸಂಗ್ರಹಾಲಯ ಇದಾಗಿದೆ. ಹಲವಾರು ಪಕ್ಷಿ, ಪ್ರಾಣಿಗಳೂ ಸೇರಿ, ಇದೀಗ ಕಾಡಿನ ರಾಜ ಸಿಂಹವನ್ನೂ ನೋಡುವ ಭಾಗ್ಯ ಸಿಕ್ಕಂತಾಗಿದೆ.

ಮೊದಲ ದಿನವೇ ಹೊಸ ಸಿಂಹಗಳ ನೋಡಲು ನೂರಾರು ಶಾಲಾ ಮಕ್ಕಳು ಆಗಮಿಸಿದ್ದರು. ಸಿಂಹಗಳು ನೋಡಿ ಸಂತಸಪಟ್ಟರು.

ಬಿಂಕದಕಟ್ಟಿ ಮೃಗಾಲಯ ತನ್ನ ರಜತಮಹೋತ್ಸವ ಆಚರಿಸಲು ಸಿದ್ಧವಾಗುತ್ತಿದೆ. ಕರ್ನಾಟಕದಲ್ಲಿ ಮೈಸೂರು ಝೂ ನಂತರ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾದ ಈ ಸ್ಥಳ ವಿಧವಿಧವಾದ ಪ್ರಾಣಿ-ಪಕ್ಷಿಗಳೊಂದಿಗೆ ಈಗ, ಕಾಡಿನ ರಾಜ ಸಿಂಹವೂ ಬಂದು ಸೇರಿದೆ. ಇಬ್ಬರನ್ನೂ ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ರಾಜ್ಯದಲ್ಲಿಯೇ ಪ್ರಸಿದ್ಧ ಮೃಗಾಲಯವನ್ನಾಗಿ ಅಭಿವೃದ್ಧಿಪಡಿಸಲು ನಾವು ಉತ್ಸುಕರಾಗಿದ್ದೇವೆ. ಅರಣ್ಯ ಸಚಿವರಾಗಿದ್ದ ಉಮೇಶ ಕತ್ತಿಯವರೊಂದಿಗೆ ಈ ಮೃಗಾಲಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದೆವು.

-ಎಚ್ ಕೆ.ಪಾಟೀಲ್, ಶಾಸಕರು

ಸಿಂಹಗಳಿಗೆ ನೀರು ಕುಡಿಸಿ, ಆಹಾರ ನೀಡುತ್ತ ಇಂಧೋರ್‌ನಿಂದ ಗದಗ ತಲುಪಲು ನಮಗೆ ಒಂದು ಇಡೀ ದಿನವೇ ಬೇಕಾಯಿತು. ಮೊದಲು 20-25 ದಿನಗಳ ಕಾಲ ಎರಡು ಸಿಂಹಗಳನ್ನು ಕ್ವಾರಂಟೈನಲ್ಲಿ ಇಡಲಾಗುತ್ತದೆ. ಇಲ್ಲಿನ ವಾತಾವರಣ, ಆಹಾರ ಪದ್ಧತಿಗಳಿಗೆ ಹೊಂದಿಕೊಳ್ಳಬೇಕು. ಅವುಗಳಿಗೂ ಇಲ್ಲಿನ ವಾತಾವರಣಕ್ಕೆ ಹೊಂಡಿಕೊಳ್ಳುತ್ತೇವೆಂಬ ವಿಶ್ವಾಸ ಮೂಡಬೇಕಿದೆ. ಹೀಗಾಗಿ 25 ದಿನಗಳ ನಂತರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.

-ಡಾ. ಪ್ರಕಾಶ್ ಜಟ್ಟೆಣ್ಣವರ್. ವೈದ್ಯರು

ಪ್ರಾಣಿಗಳನ್ನು ದತ್ತು ಪಡೆದುಕೊಳ್ಳುವ ಯೋಜನೆಯೊಂದನ್ನು ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯಡಿ ಯಾವುದಾದರೊಂದು ಪ್ರಾಣಿಯನ್ನು ದತ್ತು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಪ್ರಾಣಿಪ್ರಿಯರು ಹುಲಿ, ಕರಡಿ ಇತ್ಯಾದಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಈಗ ಹೊಸದಾಗಿ ಆಗಮಿಸಿರುವ ಸಿಂಹಗಳನ್ನು ಯಾರಾದರೂ ದತ್ತು ಪಡೆಯಲು ಆಸಕ್ತರಿದ್ದರೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

-ದೀಪಿಕಾ ವಾಜಪೇಯಿ, ಡಿಎಫ್ಓ, ಗದಗ

Spread the love

LEAVE A REPLY

Please enter your comment!
Please enter your name here