ಕಳೆದ ನಾಲ್ಕೈದು ದಿನಗಳಿಂದ 40 ಅಡಿ ಎತ್ತರದ ತೆಂಗಿನ ಮರವೇರಿ ಕುಳಿತ ಕೋತಿಯ ರಕ್ಷಣೆಗೆ ಹರಸಾಹಸ
ವಿಜಯಸಾಕ್ಷಿ ಸುದ್ದಿ, ಗದಗ
ಅನ್ನ, ನೀರು ಅಥವಾ ಬೇರಾವುದೇ ಆಹಾರ ಸೇವಿಸದೇ ಮನುಷ್ಯರಾದ ನಾವು ಒಂದೇ ಒಂದು ದಿನವನ್ನೂ ಕಳೆಯುವುದು ಅಸಾಧ್ಯವೇ. ನಾವಾದರೋ, ಆಯಾ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿಬಿಡುತ್ತೇವೆ. ಆದರೆ, ಮೂಕ ಪ್ರಾಣಿಗಳು ಸಂಕಷ್ಟದಲ್ಲಿ ಸಿಲುಕಿ ಆಹಾರವೂ ಸಿಗದೇ ಅನುಭವಿಸುವ ಯಾತನೆ ಎಲ್ಲರಿಗೂ ಅರ್ಥವಾಗದು.

ಅತ್ತ ತಾನು `ತೊಂದರೆಯಲ್ಲಿ ಸಿಲುಕಿದ್ದೇನೆ, ನನ್ನನ್ನು ರಕ್ಷಿಸಿ’ ಎಂದು ಯಾರಲ್ಲೂ ಬೇಡಲು ಸಾಧ್ಯವಿಲ್ಲ. ಅನುಭವಿಸುತ್ತಿರುವ ತೊಂದರೆಯಿಂದ ಪಾರಾಗೋಣವೆಂದರೂ ದಾರಿಯಿಲ್ಲ. ಇಂಥದೊಂದು ಮನಕಲಕುವ ಘಟನೆ ನಗರದ ಮುಳಗುಂದ ನಾಕಾ ಬಳಿ ನಡೆದಿದೆ.
ಮರವೇರಿದ ಕೋತಿ, ಕೆಳಗಿಳಿಯಲಾರದೇ ಸಂಕಟ
ಕಳೆದ ನಾಲ್ಕೈದು ದಿನಗಳ ಹಿಂದೆ ಕೋತಿಯೊಂದು ಆಹಾರವರಸಿ ಮುಳಗುಂದ ನಾಕಾ ಬಳಿಯಲ್ಲಿ 40 ಅಡಿ ಎತ್ತರದ ತೆಂಗಿನ ಮರವನ್ನು ಏರಿಬಿಟ್ಟಿತ್ತು. ಆದರೆ, ಮೊದಲೇ ಗಾಯಗೊಂಡಿತ್ತೋ ಅಥವಾ ಮರವೇರಿದ ಬಳಿಕ ಗಾಯ ಮಾಡಿಕೊಂಡಿತ್ತೋ ತಿಳಿಯದು. ಏರಿದ ಮರವನ್ನು ಇಳಿಯಲಾರದೇ ಅಲ್ಲಿಯೇ ಕುಳಿತು ಒದ್ದಾಡುತ್ತ, ಚೀರುತ್ತಲೇ ಇತ್ತು. ಸರಿಯಾಗಿ ನೀರು, ಆಹಾರವೂ ಸಿಗದೇ ನರಳಾಡುತ್ತಿತ್ತು.

ಮೊದಲ ದಿನ ಮರದ ಮೇಲಿದ್ದ ಈ ಕೋತಿಯ ಗದ್ದಲ ಕೇಳಿದ ಸುತ್ತಮುತ್ತಲಿನ ನಿವಾಸಿಗಳು ಅಷ್ಟಾಗಿ ಗಮನಿಸಿರಲಿಲ್ಲ. ಕೋತಿ ಮರವೇರುವುದು ಸಾಮಾನ್ಯವೇ. ನಿಧಾನವಾಗಿ ಕೆಳಗಿಳಿದೀತು ಎಂದೇ ನಿರೀಕ್ಷಿಸುತ್ತಿದ್ದರು. ಆದರೆ, ಒಂದಲ್ಲ, ಎರಡಲ್ಲ, ನಾಲ್ಕು ದಿನಗಳೇ ಕಳೆದರೂ ಕೋತಿ ಮರದ ಮೇಲೆಯೇ ಕುಳಿತು ಚೀರಾಡುತ್ತಿತ್ತು. ಒಂದಿಷ್ಟು ಜನ ಮರದ ಬಳಿ ನಿಂತು ಗಮನಿಸಿದಾಗ, ಕೋತಿ ಗಾಯಗೊಂಡಿರುವಂತೆ ಕಂಡುಬಂದಿತ್ತು.
ಕೂಡಲೇ ಕೆಲ ಸಾರ್ವಜನಿಕರು ಮೂಕ ಕೋತಿಯ ಪ್ರಾಣ ಉಳಿಸಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಹಾಗಿದ್ದರೂ, ಸೂಕ್ತವಾಗಿ ಸ್ಪಂದಿಸದಿದ್ದಾಗ, ಸ್ಥಳೀಯರು ಮಾಧ್ಯಮ ಪ್ರತಿನಿಧಿಗಳ ಮೂಲಕ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರ ಗಮನಕ್ಕೆ ತಂದಿದ್ದರು.
ಆಪರೇಶನ್ ಮಂಕಿ

ನಾಲ್ಕು ದಿನಗಳ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ 40 ಅಡಿ ಎತ್ತರದಲ್ಲಿ ಕುಳಿತ ಕೋತಿಯ ರಕ್ಷಣೆಗೆ ಸತತ ಐದು ಗಂಟೆಗಳ ಕಾಲ ವಿಧ ವಿಧವಾಗಿ ಕಾರ್ಯಾಚರಣೆ ನಡೆಸಿದರೂ ಕೋತಿಯನ್ನು ಕೆಳಗಿಳಿಸುವಲ್ಲಿ ವಿಫಲರಾದರು.

ಅರಣ್ಯ ಇಲಾಖೆಯ ಅಧಿಕಾರಿಗಳ ಅರಿವಳಿಕೆ ನೀಡುವ ಕಾರ್ಯಾಚರಣೆಯೂ ವಿಫಲವಾಗಿದೆ. ತೆಂಗಿನ ಗರಿಗಳ ಸಂದುಗಳಲ್ಲಿ ಕುಳಿತಿದ್ದ ಕೋತಿ ಸರಿಯಾಗಿ ಕಾಣಿಸದೇ ಇರುವುದರಿಂದ ಅರಿವಳಿಕೆ ನೀಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು.
ಪೂರಕ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ವಾಟರ್ ಫೈರ್ ಮೂಲಕ ಕೋತಿಯ ಜಾಗ ಬದಲಾಯಿಸುವಲ್ಲಿಯೂ ವಿಫಲರಾದರು. ಕೋತಿಯ ಮೂಕ ರೋಧನ ನೋಡಿ ಜನರು ಮರುಗಿದ್ದಾರೆ.

ಸುಮಾರು ಐದು ಗಂಟೆಗಳ ಕಾಲ ಅರಣ್ಯ ಹಾಗೂ ಅಗ್ನಿಶಾಮಕ ದಳದವರ ಕಾರ್ಯಾಚರಣೆ ವಿಫಲವಾಗಿ, ಮರವೇರಿದ್ದ ಕೋತಿಯ ರಕ್ಷಣೆ ಸಾಧ್ಯವಾಗಿಲ್ಲ. ಮುಂದೇನು ಎಂಬ ದಾರಿ ತಿಳಿಯದೇ ಅರಣ್ಯ ಇಲಾಖೆಯ ಅಧಿಕಾರಿಗಳೂ ಗೊಂದಲದಲ್ಲಿ ಮುಳುಗಿದ್ದರು. ಹೇಗಾದರೂ ಸರಿ, ಕೋತಿಯನ್ನು ರಕ್ಷಣೆ ಮಾಡಲೇಬೇಕೆಂದು ಕೈಗೊಂಡ ಎಲ್ಲ ಮಾರ್ಗಗಳೂ ವಿಫಲವಾದವು. ಹೀಗಾಗಿ, ಭಾನುವಾರ ಕ್ರೇನ್ ಮೂಲಕ ಅಥವಾ ಇನ್ಯಾವುದಾದರೂ ಮಾರ್ಗದ ಮೂಲಕ ಕೋತಿಯನ್ನು ರಕ್ಷಣೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.