HomeKarnataka Newsವಿಬಿ-ಜಿರಾಮ್ ಜಿ ಅಡಿ ಕೆಲಸ ಮಾಡಿದವರಿಗೆ 15 ದಿನದಲ್ಲಿ ಕೂಲಿ ಪಾವತಿ: ವಿಳಂಬವಾದರೆ ಕಠಿಣ ಕ್ರಮ...

ವಿಬಿ-ಜಿರಾಮ್ ಜಿ ಅಡಿ ಕೆಲಸ ಮಾಡಿದವರಿಗೆ 15 ದಿನದಲ್ಲಿ ಕೂಲಿ ಪಾವತಿ: ವಿಳಂಬವಾದರೆ ಕಠಿಣ ಕ್ರಮ – ಈಶ್ವರ ಖಂಡ್ರೆ

For Dai;y Updates Join Our whatsapp Group

ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ಹಣ ಪಾವತಿಸದಿದ್ದರೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಚಾಮರಾಜನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ಸಾಮಾನ್ಯವಾಗಿ ದಿನನಿತ್ಯ ಅಥವಾ ವಾರಕ್ಕೊಮ್ಮೆ ಕೂಲಿ ಪಾವತಿಯಾಗುತ್ತದೆ. ಆದರೆ ವಿಬಿಜಿ ರಾಮ್‌ಜಿ ಯೋಜನೆಯಡಿ ಕೆಲಸ ಮಾಡಿದವರಿಗೆ 15ರಿಂದ 20 ದಿನಗಳಾದರೂ ಹಣ ಪಾವತಿಯಾಗದಿದ್ದರೆ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ ಎಂದು ಹೇಳಿದರು.

ಕನಿಷ್ಠ 7ರಿಂದ ಗರಿಷ್ಠ 10 ದಿನಗಳೊಳಗೆ ಕಾರ್ಮಿಕರಿಗೆ ಕೂಲಿ ಹಣ ಪಾವತಿಯಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಕಷ್ಟಪಟ್ಟು ದುಡಿದ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ನೀಡದಿರುವುದು ಗಂಭೀರ ವಿಚಾರ ಎಂದು ಹೇಳಿದ ಈಶ್ವರ ಖಂಡ್ರೆ, ಚಾಮರಾಜನಗರ ಜಿಲ್ಲೆಯಲ್ಲಿ ಪಿಡಿಒಗಳ ಲಾಗಿನ್‌ನಲ್ಲಿಯೇ ಸುಮಾರು 57 ಲಕ್ಷ ರೂಪಾಯಿ ಕಾಮಗಾರಿಯ ಕೂಲಿ ಹಣ ಬಾಕಿ ಇದೆ. ಕೂಡಲೇ ಬಾಕಿ ಇರುವ ಎಲ್ಲ ಕೂಲಿ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದರು.

ಬೋಗಸ್ ಬಿಲ್, ನಕಲಿ ಮಾನವ ದಿನ ಸೃಷ್ಟಿಗೆ ಬ್ರೇಕ್

ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಲಾಗಿದ್ದ ಜಮೀನಿನಲ್ಲಿ ಜನರನ್ನು ಕೂರಿಸಿ ಫೋಟೋ ತೆಗೆದು, ಬೋಗಸ್ ಮಾನವ ದಿನ ಸೃಜನೆ ಹಾಗೂ ನಕಲಿ ಬಿಲ್ ಮಾಡಿರುವ ಆರೋಪದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಈ ಪ್ರಕರಣದಲ್ಲಿ ಈಗಾಗಲೇ ಕ್ರಮಕ್ಕೆ ಆದೇಶ ನೀಡಿರುವುದಾಗಿ ತಿಳಿಸಿದ ಸಚಿವ ಈಶ್ವರ ಖಂಡ್ರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೋಗಸ್ ಬಿಲ್ ಹಾಗೂ ಕಳಪೆ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ರೀತಿಯ ದೂರುಗಳು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಗಡಿ ಜಿಲ್ಲೆಯಾದ ಚಾಮರಾಜನಗರದಿಂದ ಉದ್ಯೋಗ ಅರಸಿ ಜನರು ಬೇರೆಡೆಗೆ ಗುಳೆ ಹೋಗದಂತೆ, ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.

ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಹಾಗೂ ಶಾಶ್ವತ ಆಸ್ತಿಗಳನ್ನು ನಿರ್ಮಿಸುವ ಮೂಲಕ ಜನರಿಗೆ ದೀರ್ಘಕಾಲಿಕ ಪ್ರಯೋಜನ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮನ್ರೇಗಾ ಯೋಜನೆ ಇದೀಗ ವಿಬಿಜಿ ರಾಮ್‌ಜಿ ಯೋಜನೆಯಾಗಿ ಮುಂದುವರಿದಿದ್ದು, ಇದರಡಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಗ್ರಾಮೀಣ ಜನರು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳಿಗಾಗಿ ಒತ್ತಾಯಿಸಬೇಕು ಎಂದು ಸಚಿವರು ಕರೆ ನೀಡಿದರು.

ಅದೇ ವೇಳೆ, ಯಾವುದೇ ಕಾರಣಕ್ಕೂ ನಕಲಿ ಬಿಲ್‌ಗಳಿಗೆ ಸಹಕಾರ ನೀಡಬಾರದು. ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಪಾಡಬೇಕು ಎಂದು ಗ್ರಾಮೀಣ ಜನರಿಗೆ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img