ಬೆಳಗಾವಿ: ರಾಜ್ಯದ 1 ಕೋಟಿ 24 ಲಕ್ಷ ತಾಯಂದಿರ ಪರವಾಗಿ ಗೃಹಲಕ್ಷ್ಮಿ ಯೋಜನೆಯ ವಿಚಾರದಲ್ಲಿ ನಾವು ವಿಪಕ್ಷವಾಗಿ ಧ್ವನಿ ಎತ್ತಿದ್ದೇವೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಅವರು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಇಲ್ಲಿ ಮಾತನಾಡಿದ ಅವರು, ಆ ಮಹಿಳೆಯರಿಗೆ ಕೊಡಿಸಬೇಕಾದ ದುಡ್ಡಿನ ವಿಚಾರದಲ್ಲಿ ಧ್ವನಿ ಎತ್ತಿದ್ದೇವೆ. ಮೊನ್ನೆ ಸಚಿವರು 1.24 ಕೋಟಿ ಎಂದಿದ್ದರು. ಈಗ 1.26 ಕೋಟಿ ಎನ್ನುತ್ತಾರೆ. 2 ಲಕ್ಷ ವ್ಯತ್ಯಾಸ ಬರುತ್ತಿದೆ ಎಂದು ಆಕ್ಷೇಪಿಸಿದರು.
ಆರಂಭದಲ್ಲಿ ಜಿಲ್ಲಾ ಅಧಿಕಾರಿಗಳು ಫೆಬ್ರವರಿ, ಮಾರ್ಚ್ ತಿಂಗಳಿನ ಹಣ ಬಂದಿಲ್ಲವೆಂಬ ಮಾಹಿತಿ ಕೊಟ್ಟಿದ್ದಾರೆ. ಸದನದಲ್ಲಿ ಪ್ರಸ್ತಾಪವಾದ ಬಳಿಕ ಅಧಿಕಾರಿಗಳು ಸಚಿವರ ಮಾದರಿಯಲ್ಲೇ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಕಳೆದ 3 ದಿನಗಳಿಂದ ಇ ಮೇಲ್ ಮಾಡಿದ್ದೇನೆ. ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನ ಹಣ ಕೊಟ್ಟಿದ್ದೀರಾ? ಮಾಹಿತಿ ಕೊಡಿ ಎಂದು ಕೇಳಿದ್ದೇನೆ. 3 ದಿನಗಳಿಂದ ಅವರು ಮಾಹಿತಿ ಕೊಡುತ್ತಿಲ್ಲ ಎಂದು ಟೀಕಿಸಿದರು. ಇದರ ಹಿಂದೆ ಏನಿದೆ? ಮಾಹಿತಿ ಕೊಡಲು ಅಧಿಕಾರಿಗಳು ಅಂಜುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಬೆಳಗಾವಿಯ ಉಪ ನಿರ್ದೇಶಕರಿಗೆ 9ರಂದು ಮೇಲ್ ಹಾಕಿದ್ದೇನೆ. ಆ ಪುಣ್ಯಾತ್ಮ ಇವತ್ತಿನವರೆಗೂ ಮಾಹಿತಿ ಕೊಡಲು ಸಿದ್ಧರಿಲ್ಲ ಎಂದು ಆರೋಪಿಸಿದರು. ಇವತ್ತಿನವರೆಗೂ ಫೋನ್ ಎತ್ತಲೂ ಸಿದ್ಧರಿಲ್ಲ ಎಂದು ದೂರಿದರು.



