ಆಹಾರವು ಮಾನವನ ದೇಹಕ್ಕೆ ಅತ್ಯಗತ್ಯವಾದ ಮೂಲಭೂತ ಅವಶ್ಯಕತೆಯಾಗಿದೆ.
ದೇಹಕ್ಕೆ ಶಕ್ತಿ ಒದಗಿಸುವ ಆಹಾರ ಸಮಯಕ್ಕೆ ಸಿಗದಿದ್ದರೆ ಅಥವಾ ಹೆಚ್ಚು ಹೊತ್ತು ಹೊಟ್ಟೆ ಖಾಲಿಯಾಗಿದ್ದರೆ ಅನೇಕರು ಕಿರಿಕಿರಿ, ಅಸಹನೆ ಮತ್ತು ಕೋಪವನ್ನು ಅನುಭವಿಸುತ್ತಾರೆ. ಹಸಿವಾದಾಗ ಸಣ್ಣಪುಟ್ಟ ವಿಷಯಗಳಿಗೂ ಕೋಪಗೊಳ್ಳುವ ಈ ಸ್ಥಿತಿಯ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ನಾವು ಹೆಚ್ಚು ಸಮಯ ಆಹಾರ ಸೇವಿಸದೇ ಇದ್ದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಗ್ಲೂಕೋಸ್ ದೇಹ ಮತ್ತು ಮೆದುಳಿಗೆ ಪ್ರಮುಖ ಶಕ್ತಿಯ ಮೂಲವಾಗಿರುವುದರಿಂದ ಅದರ ಪ್ರಮಾಣ ಕಡಿಮೆಯಾದಾಗ ದೇಹವು ಅದನ್ನು ಸಮತೋಲನಕ್ಕೆ ತರಲು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಎಂಬ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‌ಗಳು ಒತ್ತಡ ಮತ್ತು ತುರ್ತು ಪ್ರತಿಕ್ರಿಯೆಗಳಿಗೆ ಕಾರಣವಾಗುವುದರಿಂದ ವ್ಯಕ್ತಿಯಲ್ಲಿ ಕೋಪ, ಅಸಹನೆ ಮತ್ತು ಕಿರಿಕಿರಿ ಹೆಚ್ಚಾಗಬಹುದು.
ಗ್ಲೂಕೋಸ್ ಮಟ್ಟ ಇಳಿದಾಗ ಮೆದುಳಿನ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಭಾವನೆಗಳು ಮತ್ತು ನಡವಳಿಕೆಯನ್ನು ನಿಯಂತ್ರಿಸುವ ಮೆದುಳಿನ ಭಾಗಗಳು ಒತ್ತಡಕ್ಕೆ ಒಳಗಾಗುತ್ತವೆ. ಪರಿಣಾಮವಾಗಿ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಕಡಿಮೆಯಾಗಿ, ಸಣ್ಣ ವಿಷಯಗಳಿಗೂ ವ್ಯಕ್ತಿ ಅತಿಯಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚುತ್ತದೆ.
ಹಸಿವಿನ ಸಮಯದಲ್ಲಿ ಕೋಪದ ಜೊತೆಗೆ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು, ತಲೆನೋವು, ಆಯಾಸ, ಹೃದಯ ಬಡಿತ ಹೆಚ್ಚಾಗುವುದು ಮತ್ತು ಮನಸ್ಥಿತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ಇವುಗಳೆಲ್ಲವೂ ದೇಹಕ್ಕೆ ಆಹಾರದ ಅಗತ್ಯವಿದೆ ಎಂಬ ಎಚ್ಚರಿಕೆಯ ಸಂಕೇತಗಳಾಗಿವೆ.
ತಜ್ಞರ ಪ್ರಕಾರ, ಹಸಿವಿನಿಂದ ಉಂಟಾಗುವ ಕಿರಿಕಿರಿ ಮತ್ತು ಕೋಪವನ್ನು ತಡೆಯಲು ನಿಯಮಿತ ಸಮಯಕ್ಕೆ ಆಹಾರ ಸೇವಿಸುವುದು ಅಗತ್ಯ. ದೀರ್ಘ ಸಮಯ ಹೊಟ್ಟೆ ಖಾಲಿ ಇರಿಸಿಕೊಳ್ಳದೇ ಸಣ್ಣ ಪ್ರಮಾಣದಲ್ಲಿ ಆರೋಗ್ಯಕರ ಆಹಾರ ಸೇವಿಸುವುದು ಉತ್ತಮ. ಹಣ್ಣುಗಳು, ಒಣಹಣ್ಣುಗಳು ಹಾಗೂ ಪೌಷ್ಟಿಕಾಂಶಯುಕ್ತ ತಿಂಡಿಗಳು ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ. ಜೊತೆಗೆ ಸಾಕಷ್ಟು ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿ ಉಳಿಯುತ್ತದೆ.
ಆರೋಗ್ಯ ತಜ್ಞರು ಜಂಕ್ ಫುಡ್‌ಗಳ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಇದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ಥಿತಿಯೂ ಉತ್ತಮವಾಗಿರುತ್ತದೆ.



