ಕನ್ನಡ ಚಿತ್ರರಂಗದ ಮಾಸ್ ನಟ ದುನಿಯಾ ವಿಜಯ್ ಅವರ ಅಭಿನಯಕ್ಕೆ ಇದೀಗ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಫಿದಾ ಆಗಿದ್ದಾರೆ. ಇಬ್ಬರೂ ಒಟ್ಟಾಗಿ ನಟಿಸಿರುವ ‘ಸ್ಲಂ ಡಾಗ್’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿಜಯ್ ಸೇತುಪತಿ, ದುನಿಯಾ ವಿಜಯ್ ಬಗ್ಗೆ ಭಾವುಕರಾಗಿ ಮಾತನಾಡಿದ್ದು, ಅವರ ವೃತ್ತಿಪರತೆ ಮತ್ತು ನಟನಾ ಕೌಶಲ್ಯವನ್ನು ಕೊಂಡಾಡಿದ್ದಾರೆ.
“ದುನಿಯಾ ಸಿನಿಮಾ ಬಿಡುಗಡೆಯಾದಾಗಲೇ ವಿಜಯ್ ಅವರ ಹೆಸರು ನನ್ನ ಗಮನಕ್ಕೆ ಬಂದಿತ್ತು. ಆದರೆ ಅವರೊಂದಿಗೆ ಕೆಲಸ ಮಾಡಿದ ನಂತರ ಅವರ ನಿಜವಾದ ಸಾಮರ್ಥ್ಯ ಗೊತ್ತಾಯಿತು. ಪಾತ್ರಕ್ಕಾಗಿ ಅವರು ತೋರಿಸುವ ಸಮರ್ಪಣೆ, ಶ್ರಮ ಮತ್ತು ತಯಾರಿ ಅಸಾಧಾರಣ. ಪ್ರತಿಯೊಂದು ದೃಶ್ಯವನ್ನೂ ಇನ್ನಷ್ಟು ಪರಿಣಾಮಕಾರಿಯಾಗಿಸಲು ಅವರು ಸದಾ ಪ್ರಯತ್ನಿಸುತ್ತಾರೆ” ಎಂದು ವಿಜಯ್ ಸೇತುಪತಿ ಹೇಳಿದರು.
“ನಿರ್ದೇಶಕರು ಹೇಳಿದುದನ್ನು ಮಾತ್ರ ಮಾಡುವ ನಟ ಅವರು ಅಲ್ಲ. ಪಾತ್ರವನ್ನು ಅರ್ಥಮಾಡಿಕೊಂಡು, ಅದಕ್ಕೆ ತಮ್ಮದೇ ಆದ ಹೊಸ ಆಯಾಮ ನೀಡುತ್ತಾರೆ. ಪ್ರತಿ ಶಾಟ್‌ನಲ್ಲಿ ವಿಭಿನ್ನವಾಗಿ ಕಾಣಬೇಕು ಎನ್ನುವ ಹಸಿವು ಅವರಲ್ಲಿದೆ. ಅವರು ಅದ್ಭುತ ನಟ ಮಾತ್ರವಲ್ಲ, ಅತ್ಯುತ್ತಮ ವ್ಯಕ್ತಿಯೂ ಹೌದು. ಅವರ ಜೊತೆ ಕೆಲಸ ಮಾಡಿದ್ದು ನನಗೆ ಗೌರವದ ಸಂಗತಿ” ಎಂದು ಸೇತುಪತಿ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದ ನಿರ್ದೇಶಕ ಪುರಿ ಜಗನ್ನಾಥ್ ಕೂಡ ದುನಿಯಾ ವಿಜಯ್ ಅವರ ಅಭಿನಯವನ್ನು ಶ್ಲಾಘಿಸಿದ್ದು, ‘ಸ್ಲಂ ಡಾಗ್’ ಚಿತ್ರದಲ್ಲಿ ಅವರ ಪಾತ್ರ ಪ್ರೇಕ್ಷಕರಿಗೆ ದೊಡ್ಡ ಅಚ್ಚರಿ ನೀಡಲಿದೆ ಎಂದು ಹೇಳಿದ್ದಾರೆ.
ಭಿಕ್ಷುಕ ಮಾಫಿಯಾದ ಸುತ್ತ ಸಾಗುವ ಈ ಆ್ಯಕ್ಷನ್ ಡ್ರಾಮಾದಲ್ಲಿ ವಿಜಯ್ ಸೇತುಪತಿ, ದುನಿಯಾ ವಿಜಯ್, ಟಬು ಸೇರಿದಂತೆ ಹಲವು ಖ್ಯಾತ ಕಲಾವಿದರು ನಟಿಸಿದ್ದು, ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ.



