ಬೆಂಗಳೂರು: ಬೆಳಗಾವಿ ಮೂಲದ ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ ಪ್ರಕರಣ ಇದೀಗ ಸಿನಿಮಾ ಕ್ಷೇತ್ರವನ್ನೂ ತಲುಪಿದೆ. ಸಾವಿರಾರು ಹೂಡಿಕೆದಾರರಿಗೆ ವಂಚನೆ ಎಸಗಿದ ಆರೋಪದಡಿ ಬಂಧಿತನಾಗಿರುವ ಶಿವಾನಂದ ನೀಲಣ್ಣವರ ವಿರುದ್ಧದ ತನಿಖೆಯಲ್ಲಿ ಹೊಸ ತಿರುವು ಸಿಕ್ಕಿದ್ದು, ಬಾಲಿವುಡ್ ನಟಿ ಸನ್ನಿ ಲಿಯೋನ್ ಸೇರಿದಂತೆ ಹಲವು ನಟ-ನಟಿಯರಿಗೆ ಕರ್ನಾಟಕ ಸಿಐಡಿ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕರಿಂದ ಅಕ್ರಮವಾಗಿ ಸಂಗ್ರಹಿಸಲಾದ ಹಣವನ್ನು ಪ್ರಚಾರ ಕಾರ್ಯಕ್ರಮಗಳು ಹಾಗೂ ಸೆಲೆಬ್ರಿಟಿಗಳ ಪಾವತಿಗೆ ಬಳಸಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರಗಳ ವಿವರ ಪಡೆಯಲು ಚಿತ್ರರಂಗದ ಗಣ್ಯರನ್ನು ವಿಚಾರಣೆಗೆ ಕರೆಯಲು ಸಿಐಡಿ ನಿರ್ಧರಿಸಿದೆ.
ಸಿಐಡಿ ತನಿಖೆಯ ಪ್ರಕಾರ, ಶಿವಂ ಅಸೋಸಿಯೇಟ್ಸ್ ಮೂಲಕ 40,700 ಹೂಡಿಕೆದಾರರಿಂದ ಸುಮಾರು 2,400 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಅದರಲ್ಲಿ 540 ಕೋಟಿ ರೂಪಾಯಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, 170 ಕೋಟಿ ರೂಪಾಯಿ ನಷ್ಟವಾಗಿದೆ. ಈ ಸಂಪೂರ್ಣ ಜಾಲವನ್ನು ನಿರ್ವಹಿಸಲು ಆರೋಪಿ 30ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬಳಸಿದ್ದಾನೆ.
ಹೊಸ ಹೂಡಿಕೆದಾರರಿಂದ ಬಂದ ಹಣವನ್ನು ಹಳೆಯ ಹೂಡಿಕೆದಾರರಿಗೆ ಲಾಭಾಂಶ ರೂಪದಲ್ಲಿ ನೀಡುವ ಪಾಂಜಿ ಮಾದರಿಯ ವಂಚನೆ ವ್ಯವಸ್ಥೆ ನಡೆಸಲಾಗುತ್ತಿತ್ತು. ಬಂಧನದ ಬಳಿಕವೂ ಕಂಪನಿಯ ಖಾತೆಗೆ ಸಾರ್ವಜನಿಕರು ಹಣ ಜಮಾ ಮಾಡಿರುವುದು ತನಿಖಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಬಂಧನದ ನಂತರವೂ 5 ಕೋಟಿಗೂ ಹೆಚ್ಚು ಹಣ ಕಂಪನಿಯ ಖಾತೆಗೆ ವರ್ಗಾವಣೆಯಾಗಿದೆ.
ಪ್ರಕರಣದಲ್ಲಿ ಅಕ್ರಮ ಹಣದಿಂದ ಖರೀದಿಸಲಾದ ಆಸ್ತಿಗಳ ಜಾಡು ಹಿಡಿದಿರುವ ಸಿಐಡಿ, ಸುಮಾರು 55 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ವಾಹನಗಳು ಹಾಗೂ ಇತರೆ ಆಸ್ತಿಗಳ ಜಪ್ತಿಗೆ ಮುಂದಾಗಿದೆ. ವಿವಿಧ ರಾಜ್ಯಗಳಲ್ಲಿ ನೋಂದಾಯಿತ ವಾಹನಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಇದೀಗ ನಟಿ ಸನ್ನಿ ಲಿಯೋನ್ ಸೇರಿದಂತೆ ಹಣ ಪಡೆದಿರುವ ಸಿನಿಮಾ ಕ್ಷೇತ್ರದ ವ್ಯಕ್ತಿಗಳ ಬ್ಯಾಂಕ್ ವ್ಯವಹಾರಗಳ ಪರಿಶೀಲನೆಗೂ ಸಿಐಡಿ ಮುಂದಾಗಿದ್ದು, ಈ ಹೈಪ್ರೊಫೈಲ್ ತನಿಖೆ ಮತ್ತಷ್ಟು ದೊಡ್ಡ ಮಟ್ಟದ ಬಹಿರಂಗಪಡಿಸುವಿಕೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.



