ವಿಜಯಸಾಕ್ಷಿ ಸುದ್ದಿ, ಗದಗ: ಭೂಮಿ, ವಸತಿ, ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿ ಹಾಗೂ ವಿಶೇಷ ಘಟಕ ಯೋಜನೆಗೆ ಏಕಗವಾಕ್ಷಿ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಿ ಜುಲೈ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಮುಂಡರಗಿ ತಾಲೂಕು ಸಂಚಾಲಕ ಎಚ್.ಡಿ. ಪೂಜಾರ ತಿಳಿಸಿದರು.
ಭೂಮಿ, ವಸತಿ, ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿ ಹಾಗೂ ವಿಶೇಷ ಘಟಕ ಯೋಜನೆಗೆ ಏಕಗವಾಕ್ಷಿ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಿ ಜುಲೈ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಮುಂಡರಗಿ ತಾಲೂಕು ಸಂಚಾಲಕ ಎಚ್.ಡಿ. ಪೂಜಾರ ತಿಳಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸಂಸ (ಅಂಬೇಡ್ಕರ್ವಾದ) ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದರು.
ಈ ಹಿಂದೆಯೂ ದಲಿತ ಸಂಘರ್ಷ ಸಮಿತಿ ಐದು ಲಕ್ಷಕ್ಕೂ ಹೆಚ್ಚು ದಲಿತರನ್ನು ಒಗ್ಗೂಡಿಸಿ ಬೃಹತ್ ಸಮಾವೇಶ ನಡೆಸಿದ್ದು, ಅದರ ಫಲವಾಗಿ ರಾಜ್ಯದಲ್ಲಿ ವಸತಿ ಶಾಲೆಗಳು ಆರಂಭಗೊಂಡವು. ಈಗ ಆ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಮಾವೇಶದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ವಿಶೇಷ ಘಟಕ ಯೋಜನೆಯಡಿ ಮೀಸಲಿರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದರಿಂದ ದಲಿತ ಸಮುದಾಯಕ್ಕೆ ದೊರೆಯಬೇಕಾದ ಸೌಲಭ್ಯಗಳು ವಂಚಿತವಾಗುತ್ತಿವೆ. ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬದಿಂದ ದಲಿತ ಯುವಕರಿಗೆ ಸರ್ಕಾರಿ ಉದ್ಯೋಗದ ಅವಕಾಶಗಳು ಸಿಗುತ್ತಿಲ್ಲ. ಜೊತೆಗೆ ಭೂಒಡೆತನ ಯೋಜನೆಯನ್ನು ಪುನರಾರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಾಲರಾಜ ಅರಬರ, ಪ್ರೊ. ಸತೀಶ ಪಾಸಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಗೌಡಣ್ಣವರ, ನಾಗರಾಜ ಗೋಕಾವಿ, ಪೂಜಾ ಬೇವೂರ, ಹನುಮಂತ ಚಲವಾದಿ, ಚೇತನಾ ಸೀತಾಲಹರಿ, ಮುತ್ತಪ್ಪ ಭಜಂತ್ರಿ, ಮಂಜುನಾಥ ಮಾತಿನ ಹಾಗೂ ರಸೂಲಸಾಬ ತಹಸೀಲ್ದಾರ್ ಉಪಸ್ಥಿತರಿದ್ದರು.



