ಕಠ್ಮಂಡು: ನೇಪಾಳದ ರಸುವಾ ಪ್ರದೇಶದಲ್ಲಿ ಭೋಟೆ ಕೋಶಿ ನದಿಯಲ್ಲಿ ದಿಢೀರ್ ಉಂಟಾದ ಭೀಕರ ಪ್ರವಾಹ ಭಾರೀ ಅವಾಂತರ ಸೃಷ್ಟಿಸಿದೆ. ಪ್ರವಾಹದಲ್ಲಿ ಇದುವರೆಗೆ 16 ಮಂದಿ ಮೃತಪಟ್ಟಿದ್ದು, ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಲ್ಲಿ 291 ಮಂದಿ ವಿದೇಶಿ ಪ್ರಜೆಗಳಾಗಿದ್ದು, ಕನಿಷ್ಠ 105 ಭಾರತೀಯ ಪ್ರವಾಸಿಗರು ಸೇರಿದ್ದಾರೆ. ನಾಪತ್ತೆಯಾದ ವಿದೇಶಿಯರಲ್ಲಿ ಅಮೆರಿಕದ ಮೂವರು, ಮಲೇಷ್ಯಾದ 17, ಬ್ರಿಟನ್‌ನ 12, ದಕ್ಷಿಣ ಆಫ್ರಿಕಾದ ನಾಲ್ವರು, ಆಸ್ಟ್ರೇಲಿಯಾದ ಒಬ್ಬರು ಹಾಗೂ ನೆದರ್ಲೆಂಡ್ಸ್‌ನ ಒಬ್ಬರು ಸೇರಿದ್ದಾರೆ. ಮತ್ತೂ 103 ಮಂದಿಯ ಪೌರತ್ವ ಇನ್ನೂ ದೃಢಪಟ್ಟಿಲ್ಲ.
ಟಿಬೆಟ್ ಗಡಿಗೆ ಹೊಂದಿಕೊಂಡಿರುವ ಮಧ್ಯ ನೇಪಾಳದ ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳು ಸೇರಿದಂತೆ ನುವಾಕೋಟ್ ಜಿಲ್ಲೆಯ ಮೇಲೂ ಪ್ರವಾಹದ ತೀವ್ರ ಪರಿಣಾಮ ಬೀರಿದೆ. ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಟಿಬೆಟ್ ಕಡೆಯಿಂದ ಭೋಟೆ ಕೋಶಿ ನದಿಗೆ ಹಠಾತ್ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ನದಿ ತೀರದ ಜನವಸತಿ ಪ್ರದೇಶಗಳು ನಲುಗಿ ಹೋಗಿವೆ.
ರಸುವಾ ಜಿಲ್ಲೆಯ ತಿಮುರೆ ಮತ್ತು ಸ್ಯಾಫ್ರುಬೆಸಿ ಪ್ರದೇಶಗಳಲ್ಲಿ ವ್ಯಾಪಕ ಹಾನಿಯಾಗಿದ್ದು, ವಾಹನಗಳು, ವಸ್ತುಗಳು ಹಾಗೂ ಆಸ್ತಿಪಾಸ್ತಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.
ನೇಪಾಳ ಸೇನೆಯ ನೆರವಿನೊಂದಿಗೆ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಭರದಿಂದ ಸಾಗಿದೆ. ರಸುವಾ, ನುವಾಕೋಟ್, ಧಾಡಿಂಗ್ ಮತ್ತು ಚಿತ್ವಾನ್ ಸೇರಿದಂತೆ ನದಿ ತಳಪ್ರದೇಶದ ಹಲವು ಜಿಲ್ಲೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.
ಭಾರತದಿಂದ ಪರಿಹಾರ ನೆರವು
ಪ್ರವಾಹದಿಂದ ತೀವ್ರ ಹಾನಿಗೊಳಗಾದ ನೇಪಾಳಕ್ಕೆ ಶೀಘ್ರವೇ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪ್ರವಾಹಕ್ಕೆ ಕಾರಣವೇನು?
ರಸುವಾದಲ್ಲಿ ಸುರಿದ ಸ್ಥಳೀಯ ಮಳೆಯಿಂದ ಈ ದಿಢೀರ್ ಪ್ರವಾಹ ಸಂಭವಿಸಿಲ್ಲ ಎನ್ನಲಾಗಿದ್ದು, ಟಿಬೆಟ್ ಭಾಗದಲ್ಲಿ ಸುರಿದ ಭಾರಿ ಮಳೆ ಅಥವಾ ಹಿಮಪಾತದಿಂದ ನದಿಯಲ್ಲಿ ಹಠಾತ್ ನೀರಿನ ಪ್ರಮಾಣ ಏರಿಕೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಪ್ರವಾಹದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.



