HomeKarnataka Newsಸೈಟ್ ಹಗರಣದ ಬೆನ್ನಲ್ಲೇ ಮತ್ತೊಂದು ಆರೋಪ; KUDA ನೇಮಕಾತಿಯಲ್ಲಿ ಗೋಲ್‌ಮಾಲ್?

ಸೈಟ್ ಹಗರಣದ ಬೆನ್ನಲ್ಲೇ ಮತ್ತೊಂದು ಆರೋಪ; KUDA ನೇಮಕಾತಿಯಲ್ಲಿ ಗೋಲ್‌ಮಾಲ್?

For Dai;y Updates Join Our whatsapp Group

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಚಾರದ ಅವ್ಯವಹಾರದ ಆರೋಪದ ಬೆನ್ನಲ್ಲೇ ಇದೀಗ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲೂ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದೆ.

ಟೆಂಡರ್ ಪ್ರಕ್ರಿಯೆ ನಡೆಸದೆ ಹಾಗೂ ಸರ್ಕಾರದ ಅನುಮೋದನೆ ಪಡೆಯದೆ ಹೆಚ್ಚುವರಿ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದು ಲೆಕ್ಕಪತ್ರ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

2025-26ನೇ ಸಾಲಿನಲ್ಲಿ ಪ್ರಾಧಿಕಾರದಲ್ಲಿ ಒಟ್ಟು ಏಳು ಮಂದಿ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರಲ್ಲಿ ನಾಲ್ವರು ಗ್ರೂಪ್‌-ಡಿ ಸಿಬ್ಬಂದಿ, ಓರ್ವ ಚಾಲಕ, ಓರ್ವ ಕಂಪ್ಯೂಟರ್ ಆಪರೇಟರ್ ಹಾಗೂ ಓರ್ವ ಕ್ಲೀನರ್ ಸೇರಿದ್ದಾರೆ.

ಆದರೆ, ಈ ಏಳು ಹುದ್ದೆಗಳ ಪೈಕಿ ಕೇವಲ ಮೂರು ಹುದ್ದೆಗಳಿಗೆ ಮಾತ್ರ ಮಂಜೂರಾತಿ ಇತ್ತು ಎಂದು ಲೆಕ್ಕಪತ್ರ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ನಾಲ್ಕು ಹುದ್ದೆಗಳಿಗೆ ಸರ್ಕಾರದ ಅನುಮೋದನೆ ಪಡೆಯದೆ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹೆಚ್ಚುವರಿ ಸಿಬ್ಬಂದಿಗೆ ₹19 ಲಕ್ಷ ಪಾವತಿ:

ಏಳು ಮಂದಿ ಸಿಬ್ಬಂದಿಗೆ ಒಟ್ಟು ₹27 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಾವತಿಸಲಾಗಿದೆ ಎನ್ನಲಾಗಿದೆ. ಈ ಪೈಕಿ ಮಂಜೂರಾತಿ ಇಲ್ಲದ ಹೆಚ್ಚುವರಿ ಹುದ್ದೆಗಳಿಗೆ ಸುಮಾರು ₹19 ಲಕ್ಷ ಪಾವತಿಸಿರುವುದು ಪರಿಶೋಧನೆಯಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಈ ಮೊತ್ತವನ್ನು ವಸೂಲಿ ಮಾಡುವಂತೆ ಪರಿಶೋಧನಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಟೆಂಡರ್ ಪ್ರಕ್ರಿಯೆ ನಡೆಸದೆ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿರುವುದು ಹಾಗೂ ಸರ್ಕಾರದ ಅನುಮೋದನೆ ಇಲ್ಲದೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿರುವ ಆರೋಪಗಳು ಇದೀಗ ಪ್ರಾಧಿಕಾರದ ಕಾರ್ಯವೈಖರಿ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಸೈಟ್ ಹಗರಣದ ಬೆನ್ನಲ್ಲೇ ಮತ್ತೊಂದು ಆರೋಪ:

ಈಗಾಗಲೇ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಸುಮಾರು ₹8.89 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣದ ತನಿಖೆಯನ್ನು ಕೊಪ್ಪಳ ನಗರ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್, ಅವರ ಪತ್ನಿ ರಮಾ ಹಾಗೂ ಸಹೋದರ ಅನಿಲ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಮಾಜಿ ಆಯುಕ್ತ ಯೋಗಾನಂದ ಅವರಿಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲೂ ನಿಯಮ ಉಲ್ಲಂಘನೆಯ ಆರೋಪ ಬೆಳಕಿಗೆ ಬಂದಿರುವುದು ಪ್ರಾಧಿಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಅಗತ್ಯ ಬಿದ್ದರೆ ಪ್ರಕರಣವನ್ನು ತನಿಖಾ ಸಂಸ್ಥೆಗೆ ವಹಿಸುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ, ನಿವೇಶನ ಹಂಚಿಕೆ ಅವ್ಯವಹಾರದ ಆರೋಪದ ಬಳಿಕ ಇದೀಗ ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಯಲ್ಲೂ ಅಕ್ರಮದ ಆರೋಪ ಕೇಳಿಬಂದಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img