ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಜೆ.ಜೆ. ಕಾಲೋನಿಯಲ್ಲಿ ನಡೆದ ಭೀಕರ ಡಬಲ್ ಮರ್ಡರ್ ಪ್ರಕರಣ ಆತಂಕ ಸೃಷ್ಟಿಸಿದೆ. 25 ವರ್ಷದ ಶಮಾ ಹಾಗೂ 21 ವರ್ಷದ ರೇಷ್ಮಾ ಎಂಬ ಅಕ್ಕ-ತಂಗಿಯನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪ್ರಕರಣದಲ್ಲಿ ಶಮಾ ಅವರ ಪತಿ ಏಜಾಜ್ ಪ್ರಮುಖ ಶಂಕಿತನಾಗಿದ್ದು, ಕೃತ್ಯ ಎಸಗಿದ ಬಳಿಕ ಮೂವರು ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿಯ ಬಂಧನಕ್ಕಾಗಿ ಚಿಂತಾಮಣಿ ನಗರ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಮೃತರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಗಾಂಜಾ ಸೇವನೆಯ ಮತ್ತಿನಲ್ಲೇ ಆರೋಪಿ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಇತ್ತ, ಚಿಂತಾಮಣಿ ನಗರದಲ್ಲಿ ಗಾಂಜಾ ಮಾರಾಟ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದು ಆರೋಪಿಯ ಬಂಧನದ ಬಳಿಕವೇ ಸ್ಪಷ್ಟವಾಗಲಿದೆ.



