ಚಿಕ್ಕಬಳ್ಳಾಪುರ: ಕೇವಲ ಎರಡು ದಿನಗಳ ಹಿಂದೆ ಜನಿಸಿದ್ದ ನವಜಾತ ಗಂಡು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತಾಯಿ ನಾಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 24ರಂದು ಹೆರಿಗೆಗೆ ದಾಖಲಾಗಿದ್ದ ಯುವತಿಗೆ ಗಂಡು ಮಗು ಜನಿಸಿತ್ತು. ಮಗುವಿಗೆ ಕಡಿಮೆ ತೂಕ ಹಾಗೂ ಉಸಿರಾಟದ ತೊಂದರೆ ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ತಾಯಿ ಹಾಗೂ ಕೇರ್‌ಟೇಕರ್ ನರ್ಸ್ ಜೊತೆ ಅಂಬುಲೆನ್ಸ್ ಮೂಲಕ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.
ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಬಂದ ಬಳಿಕ ಮಗುವಿನ ಚಿಕಿತ್ಸೆಗೆ ಹಣ ತರುತ್ತೇನೆ ಎಂದು ಹೇಳಿ ಹೊರಹೋದ ತಾಯಿ ಮತ್ತೆ ವಾಪಸ್ ಬಂದಿಲ್ಲ ಎಂದು ತಿಳಿದುಬಂದಿದೆ. ತಾಯಿ ಇಲ್ಲದೆ ಮಗು ಆಸ್ಪತ್ರೆಯ ಎನ್‌ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಮಗುವಿನ ಪೋಷಕರ ಬಗ್ಗೆ ವಿಚಾರಿಸಿದಾಗ ಕೇರ್‌ಟೇಕರ್ ನರ್ಸ್ ಈ ಮಾಹಿತಿ ನೀಡಿದ್ದಾರೆ.
ಇದರಿಂದ ಅನುಮಾನಗೊಂಡ ಆಸ್ಪತ್ರೆ ಆಡಳಿತ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ. ಮಾಹಿತಿ ಪಡೆದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ನೀಡಿದ್ದ ಆಧಾರ್ ಕಾರ್ಡ್‌ನಲ್ಲಿ ಹಾವೇರಿ ಜಿಲ್ಲೆಯ ವಿಳಾಸ ಪತ್ತೆಯಾಗಿದ್ದು, ಅದರ ಆಧಾರದಲ್ಲಿ ಆಕೆಯ ಪತ್ತೆ ಕಾರ್ಯ ಮುಂದುವರಿದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಯುವತಿಗೆ ವಿವಾಹವಾಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿರುವ ಸಾಧ್ಯತೆ ಕುರಿತು ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.



