ಕೊಪ್ಪಳ: ಹನುಮ ಹುಟ್ಟಿದ ನಾಡು ಎಂದೇ ಪ್ರಸಿದ್ಧವಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತಕ್ಕೆ ಸಂಸದ ಯದುವೀರ್ ಭೇಟಿ ನೀಡಿ, ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಂಜನಾದ್ರಿಗೆ ಆಗಮಿಸಿದ ಸಂಸದ ಯದುವೀರ್ ಅವರು ಬೆಟ್ಟದ 575 ಮೆಟ್ಟಿಲುಗಳನ್ನು ಏರುವ ಮೂಲಕ ಹನುಮನ ದರ್ಶನ ಪಡೆದರು. ಬಳಿಕ ದೇವಾಲಯದಲ್ಲಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಂಜನಾದ್ರಿಯ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಹಿನ್ನೆಲೆಯಲ್ಲಿ ಸಂಸದ ಯದುವೀರ್ ಅವರ ಭೇಟಿ ವಿಶೇಷ ಗಮನ ಸೆಳೆಯಿತು.



