HomeIndia Newsಮೀನಿನ ಭೋಗ್ ಸ್ವೀಕರಿಸಿ ಆಹಾರ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟ ಸುವೇಂದು ಅಧಿಕಾರಿ!

ಮೀನಿನ ಭೋಗ್ ಸ್ವೀಕರಿಸಿ ಆಹಾರ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟ ಸುವೇಂದು ಅಧಿಕಾರಿ!

For Dai;y Updates Join Our whatsapp Group

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಕೋಲ್ಕತ್ತಾದ ಐತಿಹಾಸಿಕ ಕಾಳಿಘಾಟ್ ದೇವಾಲಯಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಮೀನಿನ ಭೋಗ್ ಸ್ವೀಕರಿಸುವ ಮೂಲಕ ಇತ್ತೀಚೆಗೆ ತೀವ್ರ ಚರ್ಚೆಗೆ ಕಾರಣವಾಗಿದ್ದ ಸಸ್ಯಾಹಾರ-ಮಾಂಸಾಹಾರ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ.

ಶಾಕ್ತ ಹಿಂದೂಗಳಿಗೆ ಪವಿತ್ರವಾಗಿರುವ ಕೌಶಿಕಿ ಅಮಾವಾಸ್ಯೆ ಸಂದರ್ಭದಲ್ಲಿ ಕಾಳಿಘಾಟ್ ದೇವಾಲಯಕ್ಕೆ ಭೇಟಿ ನೀಡಿದ ಸುವೇಂದು ಅಧಿಕಾರಿ, ನೆಲದ ಮೇಲೆ ಕುಳಿತು ದೇವಿಗೆ ಅರ್ಪಿಸಲಾದ ಪ್ರಸಾದವನ್ನು ಸ್ವೀಕರಿಸಿದರು. ಭೋಗ್‌ನಲ್ಲಿ ಕಾಳಿಘಾಟ್‌ನ ಸಾಂಪ್ರದಾಯಿಕ ದೊಡ್ಡ ಮೀನಿನ ತಲೆ, ಹುರಿದ ಮೀನು ಹಾಗೂ ಬಸಂತಿ ಪುಲಾವ್ ಇದ್ದವು ಎನ್ನಲಾಗಿದೆ.

ಕಾಳಿಘಾಟ್ ದೇವಾಲಯದಲ್ಲಿ ಕಾಳಿ ದೇವಿಗೆ ಮೀನು ಹಾಗೂ ಬಲಿ ನೀಡಿದ ಮೇಕೆಯ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಭಕ್ತರಿಗೆ ಪ್ರಸಾದವಾಗಿ ವಿತರಿಸುವುದು ಶತಮಾನಗಳ ಸಂಪ್ರದಾಯವಾಗಿದೆ.

ದುರ್ಗಾಪೂಜೆ ಸಂದರ್ಭದಲ್ಲಿ ಬಂಗಾಳಿ ಹಿಂದೂಗಳು ಮಾಂಸಾಹಾರ ಸೇವಿಸುವುದನ್ನು ತ್ಯಜಿಸಬೇಕು ಎಂದು ಮಧ್ಯಪ್ರದೇಶದ ಬಾಗೇಶ್ವರ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ ಕರೆ ನೀಡಿದ್ದರು. ಪೂಜೆಯ ಸಂದರ್ಭದಲ್ಲಿ ಮಾಂಸಾಹಾರ ಸೇವಿಸುವವರನ್ನು ಪಾಖಂಡಿಗಳು ಎಂದು ಟೀಕಿಸಿದ್ದರು ಎನ್ನಲಾಗಿದೆ.

ಈ ಹೇಳಿಕೆ ಬಂಗಾಳದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ದುರ್ಗಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಲ್ಲಿ ಮೀನು-ಮಾಂಸ ಸೇವಿಸುವ ಹಾಗೂ ದೇವರಿಗೆ ಮಾಂಸಾಹಾರದ ಭೋಗ್ ಅರ್ಪಿಸುವ ಸಂಪ್ರದಾಯ ಹೊಂದಿರುವ ಬಂಗಾಳಿ ಸಮಾಜದಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.

ಈ ನಡುವೆ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಬಂಗಾಳಿಗಳು ಏನು ತಿನ್ನಬೇಕು ಎಂಬುದನ್ನು ಯಾವುದೇ ಬಾಬಾಗಳು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಬಂಗಾಳಿಗಳು ಮೀನು-ಮಾಂಸ ಸೇವಿಸುತ್ತಾರೆ ಹಾಗೂ ಸ್ವಾಮಿ ವಿವೇಕಾನಂದರೂ ಇದನ್ನು ಸಮರ್ಥಿಸಿದ್ದರು ಎಂದು ಅವರು ಹೇಳಿದ್ದರು.

ಇದೀಗ ಕಾಳಿಘಾಟ್ ದೇವಾಲಯದಲ್ಲಿ ಮೀನಿನ ಭೋಗ್ ಸ್ವೀಕರಿಸಿರುವ ಸುವೇಂದು ಅಧಿಕಾರಿ, ಬಂಗಾಳದ ಸಂಪ್ರದಾಯದ ಪರ ನಿಲುವು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ತಾವು ಸನಾತನಿ ಹಿಂದೂ. ಮಹಾಷ್ಟಮಿ ಹಾಗೂ ಕಾರ್ತಿಕ ಮಾಸದಲ್ಲಿ ಸಾತ್ವಿಕ ಆಹಾರ ಸೇವಿಸುತ್ತೇನೆ. ಅದೇ ಸಂದರ್ಭದಲ್ಲಿ ಮಾತೆ ಕಾಳಿಗೆ ಅರ್ಪಿಸಲಾದ ಮೀನು ಹಾಗೂ ಮಾಂಸದ ಪ್ರಸಾದವನ್ನೂ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ಸ್ವೀಕರಿಸುವುದು ಅಥವಾ ಬಿಡುವುದು ಜನರಿಗೆ ಬಿಟ್ಟ ವಿಚಾರ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕೂಡ ಪ್ರತಿಕ್ರಿಯಿಸಿ, ಸುವೇಂದು ಅಧಿಕಾರಿ ಕಾಳಿಘಾಟ್‌ನಲ್ಲಿ ಸಾಂಪ್ರದಾಯಿಕ ಮೀನಿನ ಭೋಗ್ ಸ್ವೀಕರಿಸುವ ಮೂಲಕ ಬಂಗಾಳದ ನಂಬಿಕೆ, ಪರಂಪರೆ ಹಾಗೂ ಜೀವನಶೈಲಿಗೆ ಗೌರವ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದರೊಂದಿಗೆ ಮಾಂಸಾಹಾರದ ಕುರಿತ ಅನಗತ್ಯ ವಿವಾದಕ್ಕೆ ತೆರೆ ಬೀಳಲಿ ಎಂದು ಅವರು ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img