ವಿಜಯಸಾಕ್ಷಿ ಸುದ್ದಿ, ಡಂಬಳ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಡೋಣಿ ಗ್ರಾಮದ ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ನಂದಿಬಸವೇಶ್ವರ ಜಾತ್ರಾ ಮಹೋತ್ಸವವು ಭಕ್ತಿಸಾಗರದ ನಡುವೆ ವಿವಿಧ ವಾದ್ಯ ವೈಭವಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠವು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಪರಿಸರ ಸಂರಕ್ಷಣೆ ಮತ್ತು ಜಾಗೃತಿಗೆ ವಿಶೇಷ ಆದ್ಯತೆ ನೀಡುತ್ತಿರುವುದು ಜಾತ್ರೆಯ ಪ್ರಮುಖ ವೈಶಿಷ್ಟ್ಯವಾಗಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಉಳಿಸಿ ಬೆಳೆಸುವ ಸಂದೇಶವನ್ನು ಸಾರಲಾಯಿತು.
ಮಠದ ವತಿಯಿಂದ ವರ್ಷವಿಡೀ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳ ಎರಡನೇ ಭಾನುವಾರ ಪರಿಸರ ಪ್ರಿಯರಿಗೆ ಕಪ್ಪತ್ತಗುಡ್ಡದ ವಿಶೇಷತೆಗಳು ಹಾಗೂ ಬಂಗಾರಕೊಳ್ಳದ ವೀಕ್ಷಣೆಗೆ ಅವಕಾಶ ಕಲ್ಪಿಸಿ, ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಪರಿಸರ ಉತ್ಸವ, ಪರಿಸರ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ ಹಾಗೂ ಪ್ರದರ್ಶನ ಕಾರ್ಯಕ್ರಮಗಳಿಗೆ ಮಠದ ವತಿಯಿಂದ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಪ್ಪತ್ತಗುಡ್ಡದಲ್ಲಿರುವ ಅಪರೂಪದ ಗಿಡಮೂಲಿಕೆಗಳು ಮತ್ತು ಸಸ್ಯ ಸಂಪತ್ತಿನ ಸಂರಕ್ಷಣೆಯ ಬಗ್ಗೆಯೂ ಭಕ್ತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಗುಡ್ಡದ ತಪ್ಪಲು ಪ್ರದೇಶಗಳಲ್ಲಿನ ಗಿಡಮೂಲಿಕೆಗಳನ್ನು ಅನಗತ್ಯವಾಗಿ ಕೀಳದಂತೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಪರಿಸರ ಉತ್ಸವದ ಮಹತ್ವವನ್ನು ಆಗಮಿಸಿದ ಭಕ್ತರಿಗೆ ತಿಳಿಸಲಾಯಿತು. ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠದ ರಥೋತ್ಸವದಲ್ಲಿ ವಿವಿಧ ಜಿಲ್ಲೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠ ಹಾಗೂ ಗದಗ ಮಠ ಸ್ಥಾಪನೆಯಾಗಿ ಸುಮಾರು 300 ವರ್ಷಗಳ ಇತಿಹಾಸವಿದ್ದು, ಕಪ್ಪತ್ತಗುಡ್ಡ ಪ್ರದೇಶದಲ್ಲಿ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.
ಪುರಾಣಗಳ ಪ್ರಕಾರ, ನಂದಿವೇರಿ ಬಸವಣ್ಣನನ್ನು ಶಿವನ ವಾಹನವೆಂದು ನಂಬಲಾಗಿದ್ದು, ಕೈಲಾಸದಿಂದ ಶಿವ-ಪಾರ್ವತಿಯರು ನಂದಿಯ ಮೂಲಕ ಈ ಕ್ಷೇತ್ರಕ್ಕೆ ಆಗಮಿಸಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಶಿವ, ಪಾರ್ವತಿ ಹಾಗೂ ದೇವಾನುದೇವತೆಗಳ ಪವಿತ್ರ ಸಾನ್ನಿಧ್ಯ ಹೊಂದಿರುವ ಕ್ಷೇತ್ರವೆಂದು ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠ ಭಕ್ತರ ನಂಬಿಕೆಯ ಕೇಂದ್ರವಾಗಿದೆ.
ಜಾತ್ರಾ ಮಹೋತ್ಸವವು ಧಾರ್ಮಿಕ ಭಕ್ತಿ, ಸಂಪ್ರದಾಯ ಹಾಗೂ ಪರಿಸರ ಕಾಳಜಿಯ ಸಂದೇಶವನ್ನು ಒಂದೇ ವೇದಿಕೆಯಲ್ಲಿ ಸಾರುವ ಮೂಲಕ ವಿಶೇಷವಾಗಿ ಗಮನ ಸೆಳೆಯಿತು.
ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಿದರೆ ಉತ್ತಮ ಮಳೆ-ಬೆಳೆಯೊಂದಿಗೆ ಆರೋಗ್ಯಯುತ ಜೀವನ ಸಾಧ್ಯವಾಗಲಿದೆ.
— ಪರಮಪೂಜ್ಯ ಶಿವಕುಮಾರ ಸ್ವಾಮೀಜಿ, ನಂದಿವೇರಿ ಸಂಸ್ಥಾನಮಠ
ವರ್ಷವಿಡೀ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಉತ್ತಮವಾಗಿರಲು ಸಾಧ್ಯ ಎಂಬ ಸಂದೇಶವನ್ನು ಶಿವಕುಮಾರ ಸ್ವಾಮೀಜಿಗಳು ನೀಡುತ್ತಿರುವುದು ಅತ್ಯಂತ ಅಮೂಲ್ಯವಾದ ಕಾರ್ಯವಾಗಿದೆ.
— ಬಾಲಚಂದ್ರ ಜಾಬಶೆಟ್ಟಿ, ಮಠದ ಭಕ್ತರು, ರಾಮದುರ್ಗ



