ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ಮತಕ್ಷೇತ್ರದ ಜನತೆ, ಅದರಲ್ಲೂ ನರೇಗಲ್ಲ ಭಾಗದ ಜನರು ನೀಡಿದ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದವೇ ನಾನು ವಿಧಾನಸಭೆಯ ಸಭಾಧ್ಯಕ್ಷನಾಗಿ ಆಯ್ಕೆಯಾಗಲು ಕಾರಣ. ನೀವು ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುವುದು ನನ್ನ ಜವಾಬ್ದಾರಿ. ನಿಮ್ಮ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ವಿಧಾನಸಭೆ ಸಭಾಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ನರೇಗಲ್ಲ ಪಟ್ಟಣಕ್ಕೆ ಭಾನುವಾರ ಆಗಮಿಸಿದ ಜಿ.ಎಸ್. ಪಾಟೀಲರಿಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅದ್ದೂರಿ ಸ್ವಾಗತ ಕೋರಿದರು.
ಪಟ್ಟಣದ ದುರ್ಗಾ ಸರ್ಕಲ್‌ನಲ್ಲಿ ತೆರೆದ ವಾಹನದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಸಭಾಧ್ಯಕ್ಷ ಸ್ಥಾನ ದೊರೆತಿರುವುದರಿಂದ ಕ್ಷೇತ್ರದ ಜನರಿಂದ ದೂರವಾಗುವುದಿಲ್ಲ. ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಶಕ್ತಿ ವಿನಿಯೋಗಿಸುವುದಾಗಿ ಭರವಸೆ ನೀಡಿದರು.
ರಸ್ತೆ, ಕುಡಿಯುವ ನೀರು, ನೀರಾವರಿ, ಶಿಕ್ಷಣ, ಆರೋಗ್ಯ ಹಾಗೂ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಗಮನ ಹರಿಸುವುದಾಗಿ ಹೇಳಿದರು.
ಸಭಾಧ್ಯಕ್ಷ ಸ್ಥಾನ ಪಕ್ಷಾತೀತ ಹಾಗೂ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ. ರಾಜ್ಯದ ಎಲ್ಲ ಶಾಸಕರನ್ನು ಸಮಾನವಾಗಿ ಕಾಣುತ್ತಾ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಅವರು, ರೈತರು, ಬಡವರು, ದೀನದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದು ತಮ್ಮ ಕರ್ತವ್ಯ ಎಂದರು.
ಪಟ್ಟಣಕ್ಕೆ ದೊರೆತ ಅದ್ಧೂರಿ ಸ್ವಾಗತಕ್ಕೆ ಭಾವುಕರಾದ ಪಾಟೀಲ, ಸಾಮಾನ್ಯವಾಗಿ ಬಂದು ಹೋಗೋಣ ಎಂದುಕೊಂಡಿದ್ದೆ. ಆದರೆ ನಿಮ್ಮ ಪ್ರೀತಿ, ಅಭಿಮಾನ ಮತ್ತು ಆತ್ಮೀಯತೆ ನನ್ನನ್ನು ಮತ್ತಷ್ಟು ಭಾವುಕರನ್ನಾಗಿಸಿದೆ. ಇಷ್ಟೊಂದು ಸಂಖ್ಯೆಯಲ್ಲಿ ಸೇರಿ ಸನ್ಮಾನಿಸಿರುವುದು ಜೀವನದ ಮರೆಯಲಾಗದ ಕ್ಷಣ ಎಂದರು.
ಈ ಸಂದರ್ಭದಲ್ಲಿ ಪಾಟೀಲರು ಶ್ರೀ ವೀರಭದ್ರೇಶ್ವರ ಹಾಗೂ ದ್ಯಾಮಮ್ಮ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಲಿಂಗೈಕ್ಯ ಗುರು ಅನ್ನದಾನ ಮಹಾಸ್ವಾಮಿಗಳನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.
ಸಭಾಧ್ಯಕ್ಷರ ಪ್ರಥಮ ನರೇಗಲ್ಲ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಅಭಿನಂದನಾ ಬ್ಯಾನರ್, ಕಟೌಟ್‌ಗಳು ಹಾಗೂ ಫಲಕಗಳು ರಾರಾಜಿಸಿದವು. ಕಾರ್ಯಕರ್ತರು ಜಯಘೋಷ ಮೊಳಗಿಸಿ, ಕ್ರೇನ್ ಮೂಲಕ ಬೃಹತ್ ಹೂಮಾಲೆ ಹಾಕಿ, ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಹಿಳೆಯರು ಆರತಿ ಬೆಳಗಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಿಥುನ ಪಾಟೀಲ, ಡಾ. ಕೆ.ಬಿ. ಧನ್ನೂರ, ಅಕ್ಷಯ ಪಾಟೀಲ, ಎಂ.ಎಸ್. ಧಡೇಸೂರಮಠ, ವಿ.ಬಿ. ಸೋಮನಕಟ್ಟಿಮಠ, ಮೈಲಾರಪ್ಪ ಚಳ್ಳಮರದ, ಎಂ.ಎನ್. ಹುಲಕೋಟಿ, ನಿಂಗನಗೌಡ ಲಕ್ಕನಗೌಡ, ಹನುಮಂತಪ್ಪ ಅಬ್ಬಿಗೇರಿ, ಅಲ್ಲಾಭಕ್ಷ ನದಾಫ್, ಎ.ಎ. ನವಲಗುಂದ, ಸದ್ದಾಂ ನಶೇಖಾನ, ಶೇಖಪ್ಪ ಜುಟ್ಟಲದ, ಶರಣಪ್ಪ ಕುರಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸಭಾಧ್ಯಕ್ಷ ಸ್ಥಾನದಿಂದ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ. ಬದಲಾಗಿ ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಸ್ಥಾನಗಳಲ್ಲಿ ಒಂದಾದ ಈ ಜವಾಬ್ದಾರಿಯನ್ನು ಕ್ಷೇತ್ರದ ಅಭಿವೃದ್ಧಿಗೆ ಹೊಸ ಅವಕಾಶವನ್ನಾಗಿ ಬಳಸಿಕೊಳ್ಳುತ್ತೇನೆ.
— ಜಿ.ಎಸ್. ಪಾಟೀಲ, ವಿಧಾನಸಭೆ ಸಭಾಧ್ಯಕ್ಷ



