ವಿಜಯಸಾಕ್ಷಿ ಸುದ್ದಿ, ಗದಗ
ರಸ್ತೆಯಲ್ಲಿ ಫೈಟ್ ನಡಿತಿದ್ರೆ ಯಾರು ತಾನೇ ಮೋಜು ನೋಡಲ್ಲ ಹೇಳಿ? ಸುಮ್ಮನೆ ನಿಂತು ನೋಡುವವರು, ನಗುವವರು, ಮೊಬೈಲ್‌ನಲ್ಲಿ ಫೋಟೋ, ವಿಡಿಯೊ ತೆಗೆಯುವವರು… ಹೀಗೇ ಥರಾವರಿಯಾಗಿ ಜಗಳವನ್ನ ರಂಜನೀಯವಾಗಿ ಕಾಣುತ್ತಾರೆ.
ಗದಗನ ಗಂಗಾಪೂರಪೇಟೆಯಲ್ಲೂ ಮಂಗಳವಾರ ಸಂಜೆ ಇಂಥದ್ದೇ ರೋಚಕ ಕಾಳಗ ನಡೆಯಿತು. ಎರಡು ಗುಂಪುಗಳ ಸುಮಾರು 20 ಜನ, ಅದರಲ್ಲಿ ಅರ್ಧಕ್ಕರ್ಧ ಜನರಿಗೆ ಹೆಣ್ಣಿನ ವೇಷ, ಕೊರಳಲ್ಲಿ ತರಕಾರಿ ಸರ.. ದುರ್ಗಾದೇವಿ ಪೂಜೆ ಮುಗಿದಿದ್ದೇ ತಡ ಶುರುವಾಯ್ತು ನೋಡಿ ಫೈಟ್..?

ಫೈಟ್ ಆರಂಭವಾಗಿ ಅರ್ಧ, ಮುಕ್ಕಾಲು ಗಂಟೆಯಾದರೂ ಪೊಲೀಸರು ಬರಲೇ ಇಲ್ಲ. ನೆರೆದಿದ್ದ ಜನ ಮಾತ್ರ ನಗನಗ್ತಾ ಜಗಳ ಎಂಜಾಯ್ ಮಾಡುತ್ತಿದ್ದರು. ವ್ಯತ್ಯಾಸ ಇಷ್ಟೇ; ಸಾಮಾನ್ಯವಾಗಿ ನಡೆಯುವ ಕದನಗಳಲ್ಲಿ ಮಾರಕಾಸ್ತ್ರಗಳಿರುತ್ತವೆ. ಇಲ್ಲಿನ ಕದನದಲ್ಲಿ ಇದ್ದಿದ್ದು ಒಂದೇ ಅಸ್ತ್ರ, ಅದು “ಸಗಣಿ”!!

ಕೆರೆ ಕಟಾಂಬ್ಲಿ ಶ್ರಾವಣದ ಹಬ್ಬ
ಇಡೀ ರಾಜ್ಯದಲ್ಲಿ ಪರಸ್ಪರ ಸಗಣಿ ಎರಚಾಟ ನಡೆಯುವುದು ಗದಗನ ಗಂಗಾಪೂರಪೇಟೆಯಲ್ಲಿ ಮಾತ್ರ. ಶ್ರಾವಣದ ವೇಳೆ ನಾಗರ ಪಂಚಮಿ ಮರುದಿನ ನಡೆಯುವ ಈ ಹಬ್ಬಕ್ಕೆ ಕೆರೆ ಕಟಾಂಬ್ಲಿ ಎನ್ನುವ ಹೆಸರು ರೂಢಿಗತವಾಗಿ ಬಂದಿದೆ.
ಸ್ಥಳೀಯರ ಪ್ರಕಾರ ಸಗಣಿ ಕದನದ ಹಿನ್ನೆಲೆ ಇಷ್ಟೇ; ಸಗಣಿಗೆ ಔಷಧೀಯ ಗುಣವಿದ್ದು ಚರ್ಮರೋಗ ಸೇರಿದಂತೆ ಹಲವು ಕಾಯಿಲೆಗಳು ವಾಸಿಯಾಗುತ್ತವೆ. ವರ್ಷಕ್ಕೊಮ್ಮೆಯಾದರೂ ಸೆಗಣಿಯೋಕುಳಿ ಆಡಿ ದೇಹ, ಮನಸು ಆರೋಗ್ಯವಾಗಿರಬೇಕು. ಜೊತೆಗೆ ಸಗಣಿ ಎಂದರೆ ತಾತ್ಸಾರವಲ್ಲ, ಅದೊಂದು ಔಷಧಿ ಎಂಬುದನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಉದ್ದೇಶ ಈ ಹಬ್ಬಕ್ಕಿದೆ.
ಸಗಣಿ ಫೈಟ್ ಗಂಭೀರವಾಗಿ ನಡೆದು ಮನಸು ಕೆಡಿಸುವಂಥದ್ದಲ್ಲ, ಆರೋಗ್ಯ ಜಾಗೃತಿ, ಮನರಂಜನೆಯ ಜೊತೆಗೆ ಮನಸುಗಳನ್ನು ಬೆಸೆಯುವ ಹಬ್ಬ.
” ಸಗಣಿ ಎಂದರೆ ಮೂಗು ಮುಚ್ಚಿಕೊಳ್ಳುವವರೇ ಜಾಸ್ತಿ ಇರುವ ಕಾಲವಿದು. ಉತ್ತರ ಕರ್ನಾಟಕದಲ್ಲಿ ಗೋಮಾತೆ ಬಗ್ಗೆ ಪೂಜ್ಯಭಾವ ಇರುವಂತೆ ಗೋಮಾತೆಯ ಸಗಣಿಗೂ ಬೇಡಿಕೆ, ಪೂಜ್ಯತಾ ಭಾವ ಇದೆ. ಸಗಣಿಯಿಂದ ಕುಳ್ಳು, ಕುಳ್ಳಿನಿಂದ ಕೂಳು ಎನ್ನುತ್ತಿದ್ದ ಕಾಲವಿತ್ತು. ಆಧುನಿಕತೆಯ ಭರಾಟೆಯಲ್ಲಿ ಮರೆಯಾದ ಸಗಣಿಯ ಮಹತ್ವವನ್ನು ಸಾರುವ ಹಬ್ಬವಿದು.”
ಅನ್ನಪೂರ್ಣ, ಸ್ಥಳೀಯರು