ವಿಜಯಸಾಕ್ಷಿ ಸುದ್ದಿ, ಗದಗ
‘ಕೊರೊನಾ ಲಸಿಕೆ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡುತ್ತಿದ್ದಂತೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲೂ ಕೋವಿಡ್ ಲಸಿಕೆ ವಿತರಿಸಲು ಜಿಲ್ಲಾಡಳಿತ ಭರ್ಜರಿ ಸಿದ್ಧತೆ ನಡೆಸಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಕೋವಿಡ್ ಲಸಿಕೆ ವಿತರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿರುವ ಅವರು, ‘ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಗುರುತಿಸಲಾಗಿರುವ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಲಸಿಕೆ ತೆಗೆದುಕೊಳ್ಳುವವರು ಸೋಂಕು ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಯನುಸಾರ ಲಸಿಕೆ ಪಡೆಯಲು ಸೂಚಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿ ನಿಗಾವಹಿಸಬೇಕು ಎಂದು ತಿಳಿಸಿದರು.
ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ತಪಾಸಣೆ ಹಾಗೂ ಪರೀಕ್ಷೆ ನಡೆಸುವುದು ನಿರಂತರವಾಗಿರಬೇಕು. ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಸೂಚಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿ.ಪಂ. ಸಿಇಒ ಡಾ.ಆನಂದ ಕೆ. ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ತಪಾಸಣೆಯನ್ನು ನಿರಂತರ ಹಾಗೂ ಸರಿಯಾಗಿ ನಡೆಸಬೇಕು. ಸೋಂಕು ಲಕ್ಷಣವಿರುವವರನ್ನು, ವೃದ್ಧರು ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿರುವವರ ಮೇಲೆ ನಿಗಾವಹಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಬಸರಿಗಿಡದ, ಜಿಲ್ಲಾ ಸಮೀಕ್ಷಾಣಾಧಿಕಾರಿ ಡಾ.ಜಗದೀಶ್ ನುಚ್ಚಿನ್, ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಬೂಸರಡ್ಡಿ ಸೇರಿದಂತೆ ಮತ್ತಿತರರು ಇದ್ದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ಸಿಬ್ಬಂದಿಗಳು, ಸೇರಿದಂತೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊದಲ ಹಂತದಲ್ಲಿ ಕೋವಿಡ್ ಲಸಿಕೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಎಂ.ಸುಂದರೇಶ್‌ಬಾಬು, ಜಿಲ್ಲಾಧಿಕಾರಿ
8895 ಜನರಿಗೆ ಕೊರೊನಾ ಲಸಿಕೆ
ಜಿಲ್ಲೆಯಲ್ಲಿ ಪ್ರಥಮ ಹಂತದ ಕೋವಿಡ್ ಲಸಿಕೆ ನೀಡಲು ೪೮ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿ ಕೇಂದ್ರಗಳಲ್ಲ್ಲೂ ಪ್ರತಿ ದಿನಕ್ಕೆ ನೂರು ಜನರಿಗೆ ಲಸಿಕೆ ಹಾಕಬಹುದು. ಪ್ರಥಮ ಹಂತದಲ್ಲಿ ಲಸಿಕೆ ನೀಡಲು ಒಟ್ಟು 8895 ಜನ ಕೊರೊನಾ ವಾರಿಯರ‍್ಸ್‌ಗಳನ್ನು ಗುರುತಿಸಲಾಗಿದ್ದು, ಅಷ್ಟೂ ಜನರಿಗೆ ಮೂರು ದಿನಗಳಲ್ಲಿ ಲಸಿಕೆ ವಿತರಿಸಬಹುದು ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ಮಾಹಿತಿ ನೀಡಿದರು.