ವಿಜಯಸಾಕ್ಷಿ ಸುದ್ದಿ,ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಬೆಂಬಲಿಸಿ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯುತ್ತಿದೆ.
ರೈತರ ಹೋರಾಟ ಬೆಂಬಲಿಸಿ ಕಾಂಗ್ರೆಸ್ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ‘ರಾಜಭವನ ಚಲೋ’ ಹಮ್ಮಿಕೊಂಡಿದೆ. ಈಗಾಗಲೇ ಪ್ರತಿಭಟನಾ ಮೆರವಣಿಗೆ ಆನಂದ್ ರಾವ್ ಸರ್ಕಲ್ ನಿಂದ ಪ್ರೀಡಂಪಾರ್ಕ್ ಕಡೆ ಹೊರಟಿದೆ. ಇಲ್ಲಿಂದ ರಾಜ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಗುತ್ತದೆ.
ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ಆಗಮಿಸಿದ್ದು, ಬೆಂಗಳೂರು ಸಂಪೂರ್ಣ ಸ್ತಬ್ಧವಾಗಿದೆ. ಇದರಿಂದ ಮೆಜೆಸ್ಟಿಕ್ ಅಕ್ಕಪಕ್ಕದ ರಸ್ತೆ, ವೃತ್ತಗಳಲ್ಲಿ ಟ್ರಾಫಿಕ್ ಉಂಟಾಗಿದೆ.
ಒಂದೆಡೆ ರಾಜಭವನ ಚಲೋಗೆ ಕಾಂಗ್ರೆಸ್ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಂದ ಅಪಾರ ಸಂಖ್ಯೆಯಲ್ಲಿ ಜನರನ್ನು ಕರೆ ತಂದಿದ್ದಾರೆ. ಇನ್ನೊಂದೆಡೆ ಸ್ವಯಂ ಪ್ರೇರಿತವಾಗಿಯೂ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ.