ಇದನ್ನ ಹೇಳ್ತಿರೋದು ನಾವಲ್ಲ, ಸಂಸದರ ಪತ್ರದಲ್ಲಿದೆ ಶಾಕಿಂಗ್ ನ್ಯೂಸ್
ವಿಜಯಸಾಕ್ಷಿ ಸುದ್ದಿ ಕೊಪ್ಪಳ:
ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಒಂದಿಲ್ಲೊಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿ ಇರ್ತಾರೆ ಅನ್ನೋದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ.
ಕೃಷಿ ಇಲಾಖೆ ಅಧಿಕಾರಿಗಳು ಅವರ ವಿರುದ್ಧ ಸಿಎಂಗೆ ಪತ್ರ ಬರೆದದ್ದು, ಈಚೆಗೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರನ್ನು ಹೇಡಿಗಳು ಎಂದು ಹೇಳಿಕೆ ನೀಡಿದ್ದು ಸಚಿವ ಬಿ.ಸಿ.ಪಾಟೀಲ ಹೆಸರು ಬಿಸಿ ಬಿಸಿ ಸುದ್ದಿಯಲ್ಲಿ ಕಾಣಿಸಿಕೊಂಡಿತ್ತು.
ಈಗ ಸಚಿವರ ಕಚೇರಿಯ ಒಳ ವಿಷಯವೊಂದು ಹೊರ ಬಿದ್ದಿದೆ. ನವೆಂಬರ್ 24ರಂದು ಸಚಿವ ಬಿ.ಸಿ.ಪಾಟೀಲರಿಗೆ ಸಂಸದ ಕರಡಿ ಸಂಗಣ್ಣನವರು ಬರೆದ ಪತ್ರ ಇದೀಗ ವೈರಲ್ ಆಗಿದೆ.
ಡಿಸೆಂಬರ್ 5ರಂದು ಸಚಿವರ ಕಚೇರಿ ತಲುಪಿರುವ ಪತ್ರದಲ್ಲಿ ಸಚಿವರ ಆಪ್ತ ಸಹಾಯಕ ರಮೇಶ್ ಜ್ಯೋತಿ ಎಂಬುವವರ ಬಗ್ಗೆ ಸಂಸದರು ವಿವರಿಸಿದ್ದಾರೆ.
ಸಂಸದರು ಪತ್ರ ಬರೆಯುವ ಅಗತ್ಯ ಇರಲಿಲ್ಲ
ಸಂಸದರು ಇದನ್ನು ಸರಿಪಡಿಸುವ ಹಾಗಿದ್ದರೆ ಮುಖತಃ ಇಲ್ಲವೇ ಫೋನ್ ಮಾಡಿ ವಿಷಯ ತಿಳಿಸಬಹುದಿತ್ತು. ಅದನ್ನು ಬಿಟ್ಟು ಪತ್ರ ಬರೆದು, ಅದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವ ಅಗತ್ಯ ಇರಲಿಲ್ಲ. ವ್ಯವಸ್ಥೆ ಸರಿ ಇಲ್ಲ. ಕ್ಲರ್ಕ್ ಇಟ್ಟುಕೊಂಡು ಸಚಿವಗಿರಿ ಮಾಡ್ಲಾ?
-ಬಿ.ಸಿ.ಪಾಟೀಲ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ, ಕೊಪ್ಪಳ.
ರಮೇಶ್ ಜ್ಯೋತಿ ಸಚಿವರ ಕಚೇರಿಯನ್ನು ಮಕ್ಕಳ ದರ್ಬಾರ್‌ಗೆ ಬಳಸಿಕೊಂಡಿದ್ದಾರೆ. ಅಪರೂಪಕ್ಕೆ ಕಚೇರಿಯಲ್ಲಿ ಕಾಣಿಸುವ ಅವರು ಮಲಗಿರುತ್ತಾರೆ. ಸಾರ್ವಜನಿಕರು, ರೈತರು ಕೆಲಸ ಕಾರ್ಯಗಳ ಕುರಿತು ಹೇಳಿದರೆ ಸಚಿವರಿಗೆ ಪರ್ಸಂಟೇಜ್ ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾರೆ ಎಂದು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.
ಆದ್ದರಿಂದ ತಕ್ಷಣವೇ ರಮೇಶ್ ಜ್ಯೋತಿ ಎಂಬಾತನನ್ನು ಆಪ್ತ ಸಹಾಯಕ ಹುದ್ದೆಯಿಂದ ತೆಗೆದು ಹಾಕಿ ಎಂದು ಕರಡಿ ಸಂಗಣ್ಣನವರು ಸಚಿವ ಬಿ.ಸಿ.ಪಾಟೀಲ ಅವರನ್ನು ಕೋರಿದ್ದಾರೆ.
ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮತ್ತೊಮ್ಮೆ ಸಚಿವ ಬಿ.ಸಿ.ಪಾಟೀಲ ಸುದ್ದಿಯಲ್ಲಿದ್ದಾರೆ.