ವಿಜಯಸಾಕ್ಷಿ ಸುದ್ದಿ, ಗದಗ: ಅಂಗಾಂಗ ದಾನಿಗಳು ಹಾಗೂ ಅಂಗಾಂಗ ಸ್ವೀಕರಿಸಿದವರು ಎಲ್ಲರಂತೆ ಸಾಮಾನ್ಯ ಮತ್ತು ಸಕ್ರಿಯ ಜೀವನ ನಡೆಸಬಹುದು ಎಂಬ ಆತ್ಮವಿಶ್ವಾಸ ಮೂಡಿಸುವಲ್ಲಿ ಇಂತಹ ಕ್ರೀಡಾಕೂಟಗಳು ಅತ್ಯಂತ ಅವಶ್ಯಕ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸಂಕಲ್ಪ ಕಿಡ್ನಿಕೇರ್ ಫೌಂಡೇಶನ್ ಹಾಗೂ ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯದಲ್ಲೇ ಮೊದಲ ‘ಗದಗ ಟ್ರಾನ್ಸ್‌ಪ್ಲಾಂಟ್ ಗೇಮ್ಸ್-2026’ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಚಿಕ್ಕ ಜಿಲ್ಲೆಯಾದರೂ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ದೊಡ್ಡ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ಇದುವರೆಗೆ 6,281 ಜನರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದು, ಒಟ್ಟಾರೆ ನೋಂದಣಿಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ ಜನಸಂಖ್ಯೆಗೆ ಹೋಲಿಸಿದರೆ ಗದಗ ಇಡೀ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಎಚ್.ಕೆ. ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.
ಅಂಗಾಂಗ ದಾನಿಗಳು ಮತ್ತು ಸ್ವೀಕರಿಸಿದವರು ಸಮಾಜದ ಎಲ್ಲರಂತೆ ಸಾಮಾನ್ಯ ಹಾಗೂ ಸಕ್ರಿಯ ಜೀವನ ನಡೆಸಬಹುದು ಎಂಬ ವಿಶ್ವಾಸ ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಟ್ರಾನ್ಸ್‌ಪ್ಲಾಂಟ್ ಗೇಮ್ಸ್‌ನಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.
ಹುಲಕೋಟಿಯ ಆರ್‌ಎಂಎಸ್ ಆಶ್ರಯದಲ್ಲಿ 12 ಉಚಿತ ಕಿಡ್ನಿ ಕಸಿ ಹಾಗೂ 100 ಉಚಿತ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಸುವ ಸಂಕಲ್ಪ ಮಾಡಲಾಗಿದೆ. ಬರುವ ಮಾರ್ಚ್ 16ರೊಳಗೆ ಎಲ್ಲ ಉಚಿತ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸುವ ಗುರಿಯಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಅವಿನಾಶ ಓದುಗೌಡರ, ಟ್ರಾನ್ಸ್‌ಪ್ಲಾಂಟ್ ಗೇಮ್ಸ್ ಕೇವಲ ಕ್ರೀಡಾಕೂಟವಲ್ಲ, ಕಸಿ ಪಡೆದವರ ಎರಡನೇ ಬದುಕಿನ ಶುಭಾರಂಭ ಎಂದರು.
ಪ್ರತಿಯೊಂದು ಕಿಡ್ನಿ ಕಸಿಯೂ ರೋಗಿಗೆ ಹೊಸ ಜೀವನ ನೀಡುತ್ತದೆ. ಒಬ್ಬ ವ್ಯಕ್ತಿಯ ಅಂಗಾಂಗ ದಾನವು ಎಂಟು ಜನರ ಹೊಸ ಬದುಕಿಗೆ ಮುನ್ನುಡಿ ಬರೆಯಬಲ್ಲದು. 2024ರವರೆಗೆ ಗದಗದಲ್ಲಿ ಅಂಗಾಂಗ ದಾನದ ಕುರಿತು ಮಾತುಕತೆಗಳೇ ಇರಲಿಲ್ಲ. ಇಂದು ಗದಗ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಡಾ. ಅರುಣಕುಮಾರ್ ಮಾತನಾಡಿ, ಕಳೆದ ವರ್ಷ ರಾಜ್ಯದಲ್ಲಿ ಮೆದುಳು ನಿಷ್ಕ್ರಿಯಗೊಂಡ 198 ಜನರಿಂದ 500ಕ್ಕೂ ಹೆಚ್ಚು ರೋಗಿಗಳಿಗೆ ವಿವಿಧ ಅಂಗಾಂಗಗಳನ್ನು ದಾನ ಮಾಡಲಾಗಿದೆ. ರಾಜ್ಯದಲ್ಲಿ 95 ಅಂಗಾಂಗ ಕಸಿ ಕೇಂದ್ರಗಳಿದ್ದು, ಗ್ರಾಮೀಣ ಭಾಗದಲ್ಲಿ ಕಿಡ್ನಿ ಕಸಿ ಮಾಡುತ್ತಿರುವ ಏಕೈಕ ಆಸ್ಪತ್ರೆ ಕೆ.ಎಚ್. ಪಾಟೀಲ ಆಸ್ಪತ್ರೆಯಾಗಿದೆ. ಅಂಗಾಂಗ ದಾನಿಗಳಲ್ಲಿ ಶೇ.75ರಷ್ಟು ಮಹಿಳೆಯರಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಡಾ. ನಾಗನೂರ, ಡಾ. ಆನಂದ ಪೋತ್ನೀಸ್, ಡಾ. ಪ್ಯಾರ್ ಅಲಿ ನೂರಾನಿ, ಡಾ. ಅಜಯ ಶರ್ಮಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಪ್ರಭು ಬುರಬುರೆ, ಅಶೋಕ ಮಂದಾಲಿ, ಡಾ. ಶರಣ್ ಆಲೂರ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
55 ಸ್ಪರ್ಧಿಗಳ ಕ್ರೀಡಾಸ್ಫೂರ್ತಿ
ಅಂಗಾಂಗ ದಾನಿಗಳು ಹಾಗೂ ಸ್ವೀಕರಿಸಿದವರು ಸೇರಿದಂತೆ 55 ಸ್ಪರ್ಧಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.



