ವಿಜಯಸಾಕ್ಷಿ ಸುದ್ದಿ, ಗದಗ: ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಭಾರೀ ಅಕ್ರಮ ನಡೆದಿದ್ದು, ಯೋಜನೆಯಡಿ ₹225 ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ ಎಂದು ಸಿಎಜಿ ವರದಿಯನ್ನು ಉಲ್ಲೇಖಿಸಿ ಗದಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಡಿ. ಕೊಳ್ಳಿ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿರುವ ಅವರು, ಚುನಾವಣೆಗೂ ಮುನ್ನ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ಹಾಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಈಗ ಯೋಜನೆಗಳ ಅನುಷ್ಠಾನದಲ್ಲಿ ವೈಫಲ್ಯ ತೋರಿದೆ ಎಂದು ದೂರಿದ್ದಾರೆ.
ಸಿಎಜಿ ವರದಿಯ ಪ್ರಕಾರ ಮೃತಪಟ್ಟ ಸುಮಾರು 1.08 ಲಕ್ಷ ಫಲಾನುಭವಿಗಳ ಹೆಸರಿನಲ್ಲಿ ₹116 ಕೋಟಿ, ಬ್ಯಾಂಕ್ ಖಾತೆ ವಿವರಗಳಿಲ್ಲದ 23,262 ಮಂದಿಗೆ ₹46.65 ಕೋಟಿ, ಒಂದೇ ಬ್ಯಾಂಕ್ ಖಾತೆಗೆ 19,020 ಫಲಾನುಭವಿಗಳ ಹೆಸರಿನಲ್ಲಿ ₹60.70 ಕೋಟಿ ಜಮೆ ಮಾಡಲಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಪರಿಶೀಲನೆ ಹೆಸರಿನಲ್ಲಿ ರಾಜ್ಯದಾದ್ಯಂತ 6 ಲಕ್ಷಕ್ಕೂ ಹೆಚ್ಚು ಅರ್ಹ ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ ಅವರು, ಗೃಹಜ್ಯೋತಿ ಯೋಜನೆಯಲ್ಲೂ ಹೊಸ ಷರತ್ತುಗಳನ್ನು ವಿಧಿಸಿ ಫಲಾನುಭವಿಗಳಿಗೆ ತೊಂದರೆ ಉಂಟು ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಯೋಜನೆಯಿಂದ ಕೈಬಿಟ್ಟಿರುವ ಅರ್ಹ ಫಲಾನುಭವಿಗಳನ್ನು ಕೂಡಲೇ ಮರುಸೇರ್ಪಡೆಗೊಳಿಸಿ, ಬಾಕಿ ಇರುವ ಹಣವನ್ನು ಜಮೆ ಮಾಡಬೇಕು. ಗೃಹಜ್ಯೋತಿ ಯೋಜನೆಯಲ್ಲಿನ ಜಟಿಲ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಮಹಿಳೆಯರಿಗೆ ಉಚಿತ ಯೋಜನೆಗಳ ಬದಲಿಗೆ ಉದ್ಯೋಗ ಸೃಷ್ಟಿ, ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಸ್ವಾವಲಂಬಿ ಬದುಕಿಗೆ ಅವಕಾಶ ಮಾಡಿಕೊಡಬೇಕು ಎಂದು ನಿರ್ಮಲಾ ಡಿ. ಕೊಳ್ಳಿ ಒತ್ತಾಯಿಸಿದರು.
ಅಲ್ಲದೆ, ಮಹಿಳೆಯರ ಹಕ್ಕುಗಳ ರಕ್ಷಣೆ ಹಾಗೂ ಯೋಜನೆಗಳಲ್ಲಿನ ಅಕ್ರಮವನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
“ಮಹಿಳೆಯರಿಗೆ ಉಚಿತ ಭಾಗ್ಯಗಳ ಭಿಕ್ಷೆ ಬೇಡ; ಗೌರವಯುತ ಬದುಕಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಸರ್ಕಾರ ಕಲ್ಪಿಸಬೇಕು.”
– ನಿರ್ಮಲಾ ಡಿ. ಕೊಳ್ಳಿ, ಜಿಲ್ಲಾಧ್ಯಕ್ಷೆ, ಬಿಜೆಪಿ ಮಹಿಳಾ ಮೋರ್ಚಾ, ಗದಗ



