ಚೆನ್ನೈ: ತಮಿಳುನಾಡಿನ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ನೀಡಲು ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ನೂತನ ಮುಖ್ಯಮಂತ್ರಿ ಹಾಗೂ TVK ಮುಖ್ಯಸ್ಥ ವಿಜಯ್ ಅವರು ಘೋಷಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ನಂತರ ನಡೆದ ತಮ್ಮ ಮೊದಲ ಭಾಷಣದಲ್ಲಿ ಅವರು ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯವನ್ನು ಸುಮಾರು 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲದ ಹೊರೆ ಜೊತೆಗೆ ಸ್ವೀಕರಿಸಿದ್ದೇನೆ ಎಂದು ಹೇಳಿದ ವಿಜಯ್, ಸಾರ್ವಜನಿಕರಿಗೆ ನೈಜ ಸ್ಥಿತಿಯನ್ನು ತಿಳಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಶ್ವೇತಪತ್ರ ಬಿಡುಗಡೆ ಮಾಡಲಾಗುವುದು ಎಂದು ಅವರು ಘೋಷಿಸಿದರು.
“ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸಗೊಳಿಸುವ ರಾಜಕಾರಣವನ್ನು ನಾನು ಮಾಡುವುದಿಲ್ಲ. ನನ್ನ ಸರ್ಕಾರ ಸಂಪೂರ್ಣ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದೆ” ಎಂದು ಅವರು ಹೇಳಿದರು. ಸರ್ಕಾರದ ಪ್ರತಿಯೊಂದು ನಿರ್ಧಾರವೂ ಜನರಿಗೆ ತಿಳಿಯುವಂತೆ ಮಾಡಲಾಗುವುದು ಎಂದೂ ಅವರು ಭರವಸೆ ನೀಡಿದರು.
“ಇದು ಕೇವಲ ನನ್ನ ಸರ್ಕಾರವಲ್ಲ, ಇದು ಜನರ ಸರ್ಕಾರ”. ಅಧಿಕಾರವನ್ನು ಜನಸೇವೆಯ ಜವಾಬ್ದಾರಿಯಾಗಿ ನೋಡಬೇಕು ಎಂದು ಒತ್ತಿ ಹೇಳಿದರು. ರಾಜ್ಯದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಸ್ವಲ್ಪ ಸಮಯ ನೀಡಬೇಕೆಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಮಾದಕ ದ್ರವ್ಯಗಳ ಹಾವಳಿಯನ್ನು ಸಂಪೂರ್ಣವಾಗಿ ಅಂತ್ಯಗೊಳಿಸುವುದು ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ವಿಜಯ್ ಘೋಷಿಸಿದರು.



