ಬೆಂಗಳೂರು: ಇತ್ತೀಚೆಗೆ ನಗರದ ಬೋರಿಂಗ್ ಆಸ್ಪತ್ರೆ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ ಘಟನೆ ಬಳಿಕವೂ ಅಪಾಯಕಾರಿ ಕಟ್ಟಡಗಳ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಘಟನೆಯ ನಂತರ ಜಿಬಿಎ ಅಧಿಕಾರಿಗಳು ಕಾಟಾಚಾರಕ್ಕೆ ಕೆಲ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದರೂ, ಹಲವೆಡೆ ಕುಸಿಯುವ ಹಂತದಲ್ಲಿರುವ ಗೋಡೆಗಳು ಮತ್ತು ಕಾಂಪೌಂಡ್‌ಗಳು ಇನ್ನೂ ಅಪಾಯಕರ ಸ್ಥಿತಿಯಲ್ಲೇ ಇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರದ ಆಸ್ಪತ್ರೆಗಳು, ಶಾಲೆಗಳು ಹಾಗೂ ಕಾಲೇಜುಗಳ ಸುತ್ತಮುತ್ತಲಿನ ಗೋಡೆಗಳಲ್ಲಿ ಗಂಭೀರ ಬಿರುಕುಗಳು ಕಾಣಿಸಿಕೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ವಿಶೇಷವಾಗಿ ಕಿಮ್ಸ್ ಆಸ್ಪತ್ರೆ ಸಮೀಪದ ಒಂದು ಕಾಲೇಜಿನ ಕಾಂಪೌಂಡ್ ಗೋಡೆ ಹಲವು ವರ್ಷಗಳಿಂದ ದುರ್ಬಲ ಸ್ಥಿತಿಯಲ್ಲಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಗೋಡೆಗಳ ಬಳಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದು, ಪಾದಚಾರಿಗಳು ಕೂಡ ನಿರಂತರವಾಗಿ ಸಂಚರಿಸುತ್ತಿದ್ದಾರೆ. ಮಳೆ ಬಂದರೆ ಗೋಡೆ ಕುಸಿಯುವ ಅಪಾಯ ಹೆಚ್ಚಾಗಿದ್ದು, ಮತ್ತೊಂದು ದುರ್ಘಟನೆ ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಪಾಯಕಾರಿ ಕಟ್ಟಡಗಳು ಹಾಗೂ ಗೋಡೆಗಳನ್ನು ತಕ್ಷಣ ಪರಿಶೀಲಿಸಿ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದು, ಜಿಬಿಎ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿದ್ದಾರೆ.



