ಬೆಂಗಳೂರು: HDK ಅವರು ಮಾಡಿದ ಆರೋಪ ದುರದ್ದೇಶದಿಂದ ಕೂಡಿದೆ ಎಂದು ಎಡಿಜಿಪಿ ಚಂದ್ರಶೇಖರ ಪ್ರತಿಕ್ರಿಯೆ ನೀಡಿದ್ದಾರೆ.
ಕುಮಾರಸ್ವಾಮಿ ಡಿಜಿಪಿ ಚಂದ್ರಶೇಖರ್ ವಿರುದ್ಧ ಮಾಡಿದ ಆರೋಪಕ್ಕೆ ಇದೀಗ ಪತ್ರದ ಮೂಲಕ ಚಂದ್ರಶೇಖರ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ತಮ್ಮ ಸಿಬ್ಬಂದಿಗೆ ಪತ್ರದ ಮೂಲಕ ಎಡಿಜಿಪಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣವೊಂದರ ಆರೋಪಿ ಎಂದು ಪತ್ರ ಪ್ರಾರಂಭಿಸಿರುವ ಚಂದ್ರಶೇಖರ್, ಕುಮಾರಸ್ವಾಮಿ ಸಾಕಷ್ಟು ಆರೋಪ ಮಾಡಿದ್ದು, ನನ್ನ ಮೇಲೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ಎಸ್ಐಟಿ ಸಕ್ಷಮ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಮಂಜೂರಾತಿ ಕೋರಿದೆ. ಆರೋಪಿ ಹೆಚ್.ಡಿ.ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ. ನಮ್ಮನ್ನು ಕುಗ್ಗಿಸುವ ಪ್ರಯತ್ನ, ನಮ್ಮಲ್ಲಿ ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಅವನು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಆತನೊಬ್ಬ ಆರೋಪಿ. ಇಂತಹ ಆರೋಪ ಮತ್ತು ಬೆದರಿಕೆಗಳಿಂದ ನಾವು ನಿರಾಶೆಗೊಳ್ಳಬಾರದು. ಎಸ್ಐಟಿ ಮುಖ್ಯಸ್ಥನಾಗಿ ನಾನು ಭಯವಿಲ್ಲದೆ ಕೆಲಸ ಮಾಡುತ್ತೇನೆ. ಪ್ರಕರಣದ ಸತ್ಯಾಸತ್ಯತೆ ಹೊರಗೆ ತರುತ್ತೇನೆ. ಎಲ್ಲಾ ಬಾಹ್ಯ ಪ್ರಭಾವದಿಂದ ನಿಮ್ಮನ್ನ ರಕ್ಷಿಸುತ್ತೇನೆ ಎಂದು ಎಸ್ಐಟಿ ಅಧಿಕಾರಿ, ಸಿಬ್ಬಂದಿಗೆ ಚಂದ್ರಶೇಖರ್ ಭರವಸೆ ನೀಡಿದ್ದಾರೆ.
ಪತ್ರದಲ್ಲಿ ಜಾರ್ಜ್ ಬರ್ನಾರ್ಡ್ ಶಾ ಅವರ ಪ್ರಸಿದ್ಧ ಇಂಗ್ಲಿಷ್ ವಾಕ್ಯ ಉಲ್ಲೇಖಿಸಿದ್ದು, ‘ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ. ಹಂದಿಗಳ ಜೊತೆಗೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೀವಿ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತವೆ’ ಆದರೆ ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ ಎಂದಿದ್ದಾರೆ.
ಅಪರಾಧಿಗಳು, ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎದುರಿಸುವ ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದು ನಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ನಮ್ಮನ್ನು ತಡೆಯಬಾರದು. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಏಕೆಂದರೆ ಸತ್ಯವು ಯಾವಾಗಲೂ ಜಯಗಳಿಸುತ್ತದೆ. ಸತ್ಯ, ದೇವರು ಮತ್ತು ನಮ್ಮ ಕಾನೂನಿನಲ್ಲಿ ನಂಬಿಕೆ ಇರಲಿ. ಸತ್ಯಮೇವ ಜಯತೆ ಎಂದು ಚಂದ್ರಶೇಖರ ಹೇಳಿದ್ದಾರೆ.