ಭುವನೇಶ್ವರ: ಒಡಿಶಾದ ಜಾರ್ಸುಗುಡದಲ್ಲಿ 60,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಪ್ರಧಾನಿ ಉದ್ಘಾಟಿಸಿದ ಹಾಗೂ ಶಂಕುಸ್ಥಾಪನೆ ಮಾಡಿದ ಯೋಜನೆಗಳಲ್ಲಿ ದೂರಸಂಪರ್ಕ, ರೈಲ್ವೆ, ಉನ್ನತ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಗ್ರಾಮೀಣ ವಸತಿ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳು ಸೇರಿವೆ.
ಡಿಜಿಟಲ್ ಭಾರತ್ ನಿಧಿಯಡಿಯಲ್ಲಿ 18,900 ಕ್ಕೂ ಹೆಚ್ಚು 4G ಸೈಟ್ಗಳಿಗೆ ಹಣಕಾಸಿನ ನೆರವು ನೀಡಲಾಗಿದೆ. ಇದರಿಂದ ಸುಮಾರು 26,700 ಸಂಪರ್ಕವಿಲ್ಲದ ಹಳ್ಳಿಗಳಿಗೆ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ. 20 ಲಕ್ಷಕ್ಕೂ ಹೆಚ್ಚು ಬಳಕೆದಾರರಿಗೆ ಇದರಿಂದ ಉಪಯೋಗವಾಗಲಿದೆ. ಈ ಟವರ್ಗಳು ಸೌರಶಕ್ತಿ ಚಾಲಿತವಾಗಿದ್ದು ಪರಿಸರ ಸ್ನೇಹಿಯಾಗಿವೆ.
ಸಂಬಲ್ಪುರ-ಸರ್ಲಾದಲ್ಲಿ ರೈಲು ಮೇಲ್ಸೇತುವೆಗೆ ಶಂಕು ಸ್ಥಾಪನೆ ನೆರವೇರಿದ್ದು, ಈ ಯೋಜನೆಗಳು ಒಡಿಶಾ ಮತ್ತು ನೆರೆಯ ರಾಜ್ಯಗಳಿಗೆ ಸರಕು ಸಾಗಾಟ ಮತ್ತು ಪ್ರಯಾಣಿಕರ ಸಂಚಾರ ಸುಗಮಗೊಳಿಸುತ್ತದೆ. ಸ್ಥಳೀಯ ಕೈಗಾರಿಕೆಗಳು ಮತ್ತು ವ್ಯಾಪಾರ ಅಭಿವೃದ್ಧಿ ಹೊಂದಲಿದೆ. ಬೆರ್ಹಾಂಪುರ ಮತ್ತು ಉಧ್ನಾ (ಸೂರತ್) ನಡುವಿನ ಅಮೃತ್ ಭಾರತ್ ಎಕ್ಸ್ಪ್ರೆಸ್ಗೆ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಈ ಯೋಜನೆ ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.



