HomeGadag Newsಕಾಡ್ಗಿಚ್ಚು ತಡೆಗಟ್ಟಲು ಅರಣ್ಯಾಧಿಕಾರಿಗಳ ವಿಭಿನ್ನ ಪ್ರಯತ್ನಕ್ಕೆ ಪ್ರಶಂಸೆ

ಕಾಡ್ಗಿಚ್ಚು ತಡೆಗಟ್ಟಲು ಅರಣ್ಯಾಧಿಕಾರಿಗಳ ವಿಭಿನ್ನ ಪ್ರಯತ್ನಕ್ಕೆ ಪ್ರಶಂಸೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲ್ಪಡುವ ಕಪ್ಪತಗುಡ್ಡವನ್ನು ಬೇಸಿಗೆಯ ಕಾಡ್ಗಿಚ್ಚಿನಿಂದ ರಕ್ಷಿಸಲು ಗದಗ ಅರಣ್ಯ ಇಲಾಖೆ ವಿನೂತನ ಕ್ರಮವನ್ನು ಕೈಗೊಂಡಿದೆ. ಬೆಟ್ಟಕ್ಕೆ ಬೆಂಕಿ ಹಚ್ಚುವವರನ್ನು ತಡೆಯಬೇಕು ಎನ್ನುವ ದೂರದೃಷ್ಟಿಯಿಂದ ಕಾಡಿನ ಒಡನಾಡಿಗಳಾದ ಕುರಿಗಾಯಿಗಳನ್ನು ಬೆಟ್ಟದ ರಕ್ಷಕರನ್ನಾಗಿ ಪರಿವರ್ತಿಸಲು ವಿಶೇಷ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಕಪ್ಪತಗುಡ್ಡದ ಹುಲ್ಲು ಅಥವಾ ಭೂಮಿ ಸುಟ್ಟುಹೋದರೆ, ಆ ವರ್ಷ ಮಳೆ ಮತ್ತು ಬೆಳೆಗಳು ಸಮೃದ್ಧವಾಗಿರುತ್ತವೆ ಎಂಬ ಬಲವಾದ ಮೂಢನಂಬಿಕೆ ಈ ಪ್ರದೇಶದ ಜನರಲ್ಲಿದೆ. ಈ ಕಾರಣಕ್ಕಾಗಿ ಕೆಲವರು ಉದ್ದೇಶಪೂರ್ವಕವಾಗಿ ಬೆಟ್ಟಕ್ಕೆ ಬೆಂಕಿ ಹಚ್ಚುತ್ತಾರೆ. ಇಲಾಖೆಯು ಬೆಂಕಿ ತಡೆಗಾಗಿ ಕುರಿಗಾಯಿಗಳ ವಿಶ್ವಾಸ ಗಳಿಸಲು ಉಪಯುಕ್ತ ವಸ್ತುಗಳನ್ನು ಒಳಗೊಂಡಿರುವ ವಿಶೇಷ ಕಿಟ್‌ಗಳನ್ನು ಒದಗಿಸುತ್ತಿದೆ. ಈ ಕಿಟ್‌ಗಳಲ್ಲಿ ಗಟ್ಟಿಮುಟ್ಟಾದ ಬೆನ್ನುಹೊರೆ, ಉಕ್ಕಿನ ನೀರಿನ ಬಾಟಲಿ, ರಾತ್ರಿಯಲ್ಲಿ ಬಳಸಲು ಗುಣಮಟ್ಟದ ಬ್ಯಾಟರಿ ಮತ್ತು ಕಪ್ಪತಗುಡ್ಡದ ಮಹತ್ವವನ್ನು ಎತ್ತಿ ತೋರಿಸುವ ಕರಪತ್ರಗಳು ಸೇರಿವೆ. ಇವುಗಳನ್ನು ಉಚಿತವಾಗಿ ವಿತರಿಸಲಾಗಿದೆ.

ಅರಣ್ಯ ಇಲಾಖೆಯಿಂದ ಕಳೆದ ವರ್ಷ, ಕುರಿಗಾಯಿಗಳ ಗುಡಿಸಲುಗಳಿಗೆ ಭೇಟಿ ನೀಡುವ ಮೂಲಕ ಕಪ್ಪತಗುಡ್ಡದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆದರೆ ಈ ಬಾರಿ, ನಾವು ಪ್ರತಿಯೊಬ್ಬ ಕುರಿಗಾಯಿಯವರನ್ನು ವೈಯಕ್ತಿಕವಾಗಿ ತಲುಪುತ್ತಿದ್ದೇವೆ ಮತ್ತು ಅವರಿಗೆ ಮನವರಿಕೆ ಮಾಡಿಕೊಡುತ್ತಿರುವ ಕಾರಣ ನಮಗೆ ಕುರಿಗಾಯಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಾರಿ 31 ಹಳ್ಳಿಗಳ ಕುರಿಗಾಯಿಗಳ ಹಟ್ಟಿಗೆ ತೆರಳಿ 700 ಕಿಟ್‌ಗಳನ್ನು ನೀಡಲಾಗಿದೆ ಎನ್ನುತ್ತಾರೆ ಮುಂಡರಗಿ ವಿಭಾಗದ ಆರ್‌ಎಫ್‌ಒ ಮಂಜುನಾಥ ರಾಮಣ್ಣ ಮೇಗಲಮನಿ.

ಕಪ್ಪತಗುಡ್ಡ ಸುತ್ತಮುತ್ತ ಇಲಾಖೆಯು ಕುರುಬರನ್ನು ಮಾತ್ರವಲ್ಲದೆ ಕಪ್ಪತಗುಡ್ಡದ ಸುತ್ತಮುತ್ತಲಿನ ಹಳ್ಳಿಗಳ ಯುವಕರನ್ನು ಆಕರ್ಷಿಸಲು ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಸಹ ಆಯೋಜಿಸಿತ್ತು. 28 ಹಳ್ಳಿಗಳಿಂದ 600ಕ್ಕೂ ಹೆಚ್ಚು ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಿದ್ದರು. ಕಪ್ಪತಗುಡ್ಡದ ಮಡಿಲಿನಲ್ಲಿರುವ ಹಳ್ಳಿಗಳ ಸಮಾಜ ಸೇವೆ, ಜಾನಪದ ಕಲಾವಿದರನ್ನು, ರೈತ ಸಾಧಕರನ್ನು ಹೀಗೆ ವಿವಿಧ ರಂಗದಲ್ಲಿ ಸಾಧನೆ ಮಾಡಿದ 200ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಕಪ್ಪತಗುಡ್ಡದ ರಕ್ಷಣೆಗಾಗಿ ಇಡೀ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನ ಮಾಡಲು ಶ್ರಮಿಸಿರುವ ಆರ್‌ಎಫ್‌ಒ ಮಂಜುನಾಥ ರಾಮಣ್ಣ ಮೇಗಲಮನಿ ಮತ್ತು ಮುಂಡರಗಿ ಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮೇಲಾರಪ್ಪ ಮಡಿವಾಳರ, ಶರಣಪ್ಪ ನೀರಲಗಿ, ಸೋಮನಗೌಡ ಪಾಟೀಲ, ರಾಮಪ್ಪ ಕಿಚಡಿ, ಸಂತೋಷ ಕಗದಾಳ, ಮೌಲಾಸಾಬ ಬನ್ನಿಕೊಪ್ಪ, ರಾಘವೇಂದ್ರ ಹೊಸಮನಿ, ರಾಹುಲ ಬಮ್ಮನಪಾಡ, ಈಶ್ವರ ಮರತೂರ, ಬಸವರಾಜ ಬಾಲವ್ವಗೊಳ, ಐಯ್ಯನಗೌಡರ, ಗಂಗಮ್ಮ ಪೂಜಾರ, ಮಂಜುನಾಥ ದೊಡ್ಡವಾಡ, ಕೃಷ್ಣಾ ಫಮ್ಮಾರ, ಬಸುರಾಜ ಕುರಬರ, ನೂರಹಮ್ಮದ ಲೈನ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಹಿರಿಯ ಅಧಿಕಾರಿಗಳ ಸಲಹೆ-ಸೂಚನೆಯ ಮೇರೆಗೆ ಮುಂಡರಗಿ ಭಾಗದ ಸಾಧಕರನ್ನು ಸನ್ಮಾನಿಸಲಾಯಿತು. ಯುವಕರು ಪರಿಸರ ಪ್ರಿಯರಾಗಬೇಕು ಎನ್ನುವ ಹಿನ್ನೆಲೆ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮತ್ತು ಕಪ್ಪತಗುಡ್ಡ ಬೆಂಕಿ ತಡೆಗಾಗಿ ಕುರಿಗಾಯಿಗಳಿಗೆ ವಿಶೇಷ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮ ಯಶಸ್ವಿಯಾಗಲು ಈ ಭಾಗದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ, ಪರಿಸರವಾದಿಗಳ ಸಹಕಾರದಿಂದ ಸಾಧ್ಯವಾಗಿದೆ”

  • ಮಂಜುನಾಥ ಮೇಗಲಮನಿ
    ಅರಣ್ಯ ವಲಯಾಧಿಕಾರಿ, ಮುಂಡರಗಿ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!