ನಾಲ್ಕು ತಿಂಗಳ ಹಿಂದೆ ದಂಪತಿ ಎರಡು ಮನೆಗಳನ್ನು ಬಾಡಿಗೆ ಪಡೆದಿದ್ದು, ಕೇವಲ ಇಬ್ಬರಿದ್ದರೂ ಎರಡು ಮನೆ ಬೇಕೆಂದು ಹೇಳಿಕೊಂಡಿದ್ದದ್ದು ಸ್ಥಳೀಯರಲ್ಲಿ ಮೊದಲಿನಿಂದಲೇ ಅನುಮಾನ ಹುಟ್ಟಿಸಿತ್ತು. ರಾತ್ರಿ ಸಮಯದಲ್ಲಿ ಮಾತ್ರ ಗೋಡೌನ್ ಬಾಗಿಲು ತೆರೆಯುತ್ತಿದ್ದು, ದಿನದ ವೇಳೆಯಲ್ಲಿ ಸಂಪೂರ್ಣ ಮೌನ ವಹಿಸುತ್ತಿದ್ದರು. ಮಾತನಾಡಲು ಪ್ರಯತ್ನಿಸಿದಾಗ ಕೈ ಸನ್ನೆಯಲ್ಲೇ ತಪ್ಪಿಸಿಕೊಳ್ಳುತ್ತಿದ್ದರು ಎಂಬುದು ಸ್ಥಳೀಯರ ಹೇಳಿಕೆ.
ಗೋಡೌನ್ ಒಳಗೆ ಡ್ರಗ್ಸ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಿದ್ದು, ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಡೆದ ದಾಳಿಯಿಂದ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಎರಡು ತಿಂಗಳ ಹಿಂದೆ ಇದೇ ಮನೆಯಲ್ಲಿ ನಡೆದ 17 ಲಕ್ಷ ರೂ. ಕಳ್ಳತನ ಪ್ರಕರಣದಲ್ಲಿಯೂ ದಂಪತಿ ಪೊಲೀಸರನ್ನು ಸಂಪರ್ಕಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೆಹಲಿ ನೋಂದಣಿಯ ಕಾರು ಬಳಕೆ, ಸ್ಥಳೀಯರೊಂದಿಗೆ ಸಂಪರ್ಕ ಕಡಿತ — ಇವೆಲ್ಲವೂ ಡ್ರಗ್ಸ್ ಜಾಲದ ಗಂಭೀರತೆಯನ್ನು ಸೂಚಿಸುತ್ತಿವೆ.
ಮೈಸೂರಿನ ರಿಂಗ್ ರಸ್ತೆಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಡ್ರಗ್ಸ್ ಜಾಲದ ಪ್ರಕರಣದ ಬಳಿಕ, ಇದೀಗ ಯಾಂಡಳ್ಳಿಯಲ್ಲಿ ನಡೆದ ಈ ದಾಳಿ ನಗರ ಸುತ್ತಮುತ್ತ ಮಾದಕ ವಸ್ತು ಮಾಫಿಯಾ ಬೇರೂರಿರುವ ಭೀತಿ ಹೆಚ್ಚಿಸಿದೆ. ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು, ಡ್ರಗ್ಸ್ ಜಾಲದ ಹಿಂದಿರುವ ಲಿಂಕ್‌ಗಳ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ.



