ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳಾ ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವ ಮತ್ತು ಅವರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವು ಬಲಿಷ್ಠವಾಗಿ ಹೊರಹೊಮ್ಮುತ್ತಿದ್ದು, ಶೀಘ್ರದಲ್ಲೇ ಗದಗ ಜಿಲ್ಲೆಯಲ್ಲೂ ಸಂಘಟನೆಯ ಕಾರ್ಯ ಚಟುವಟಿಕೆಗಳು ಆರಂಭವಾಗಲಿವೆ ಎಂದು ಸಂಘದ ರಾಜ್ಯ ಅಧ್ಯಕ್ಷೆ ರೋಶನಿ ಗೌಡ ತಿಳಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 20 ಜಿಲ್ಲೆಗಳಲ್ಲಿ ಈಗಾಗಲೇ ಸಂಘಟನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕು ಮಟ್ಟದ ಘಟಕಗಳೂ ರಚನೆಯಾಗಿವೆ. ಈಗ ಗದಗ ಜಿಲ್ಲೆಯ ಮಹಿಳಾ ನೌಕರರನ್ನು ಒಗ್ಗೂಡಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಸಂಘಟನೆಯ ಪ್ರಮುಖ ಬೇಡಿಕೆಯಾಗಿದ್ದ ಋತುಚಕ್ರ ರಜೆಯನ್ನು ರಾಜ್ಯ ಸರ್ಕಾರವು ಮಂಜೂರು ಮಾಡಿರುವುದು ದೊಡ್ಡ ಯಶಸ್ಸು. ಕೇವಲ ಸರ್ಕಾರಿ ನೌಕರರು ಮಾತ್ರವಲ್ಲದೆ, ಖಾಸಗಿ ವಲಯದ ಮಹಿಳೆಯರಿಗೂ ಈ ಸೌಲಭ್ಯ ಸಿಗುವಂತೆ ಮಾಡಿರುವುದು ಹೆಮ್ಮೆಯ ವಿಷಯ. ಇದಕ್ಕಾಗಿ ಡಿಸೆಂಬರ್ನಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಸಹಿತ ಸಂಪುಟದ ಅನೇಕ ಸಚಿವರನ್ನು ಸನ್ಮಾನಿಸಲಾಗಿದೆ ಎಂದರು.
ಅದೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 13ನ್ನು ಮಹಿಳಾ ನೌಕರರ ದಿನವನ್ನಾಗಿ ಆಚರಿಸಲು ಸರಕಾರ ಘೋಷಣೆ ಮಾಡಿರುವುದು ಸಂಘಟನೆಯ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು.
ಕಚೇರಿ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಸಿಲುಕುವ ಮಹಿಳಾ ನೌಕರರ ಮಾನಸಿಕ ಒತ್ತಡ ನಿವಾರಣೆಗಾಗಿ ಸಂಘಟನೆಯು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಗದಗ ಜಿಲ್ಲೆಯ ಎಲ್ಲಾ ಮಹಿಳಾ ನೌಕರರು ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಹಕ್ಕುಗಳ ರಕ್ಷಣೆಗೆ ಕೈಜೋಡಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಖಜಾಂಚಿ ವೀಣಾ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಎಂ. ಆಶಾರಾಣಿ ಹಾಗೂ ಮಹಿಳಾ ನೌಕರರ ಉಪಸ್ಥಿತರಿದ್ದರು.



