ಗಾಜಿಯಾಬಾದ್: ಆನ್‌ಲೈನ್ ಗೇಮ್ ಆಡಬೇಡಿ ಎಂದು ಪೋಷಕರು ಎಚ್ಚರಿಸಿದ್ದಕ್ಕೆ, ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿ ಈ ಭೀಕರ ಘಟನೆ ನಡೆದಿದ್ದು, ಇಡೀ ಪ್ರದೇಶವನ್ನು ಶೋಕಸಾಗರಕ್ಕೆ ತಳ್ಳಿದೆ.
ಮೃತ ಬಾಲಕಿಯರನ್ನು ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ಸಮಯದಿಂದಲೇ ಈ ಮೂವರು ಆನ್‌ಲೈನ್ ವಿಡಿಯೋ ಗೇಮ್‌ಗಳಿಗೆ ತೀವ್ರವಾಗಿ ವ್ಯಸನಿಯಾಗಿದ್ದರು. ವಿಶೇಷವಾಗಿ ಟಾಸ್ಕ್ ಆಧಾರಿತ ಕೊರಿಯನ್ ಲವ್ ಗೇಮ್‌ಗಳನ್ನು ಆಡುತ್ತಿದ್ದರು ಎನ್ನಲಾಗಿದೆ.
ಆಟದ ವ್ಯಸನ ಇಷ್ಟರ ಮಟ್ಟಿಗೆ ತಲುಪಿತ್ತು ಎನ್ನುವುದಕ್ಕೆ, ಹುಡುಗಿಯರು ಶಾಲೆಗೆ ಹೋಗುವುದನ್ನೇ ನಿಲ್ಲಿಸಿ ಹೆಚ್ಚಿನ ಸಮಯವನ್ನು ಮೊಬೈಲ್ ಮತ್ತು ಗೇಮಿಂಗ್‌ನಲ್ಲಿ ಕಳೆಯುತ್ತಿದ್ದರು ಎಂಬುದು ಸ್ಪಷ್ಟ ಸಾಕ್ಷಿ. ಇದನ್ನು ವಿರೋಧಿಸಿ ಪೋಷಕರು ಆನ್‌ಲೈನ್ ಗೇಮಿಂಗ್ ನಿಲ್ಲಿಸುವಂತೆ ಎಚ್ಚರಿಸಿದ್ದರು. ಇದೇ ವಿಚಾರವೇ ಈ ದಾರುಣ ಘಟನೆಯ ಹಿಂದಿನ ಪ್ರಮುಖ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ಭಾರತ್ ಸಿಟಿ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಲ್ಕನಿಯಲ್ಲಿ ಪ್ಲಾಸ್ಟಿಕ್ ಕುರ್ಚಿಯನ್ನು ಇಟ್ಟುಕೊಂಡು, ಮೂವರು ಸಹೋದರಿಯರು ಒಬ್ಬೊಬ್ಬರಾಗಿ 9ನೇ ಮಹಡಿಯಿಂದ ಹಾರಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ನೋಡುತ್ತಿದ್ದಂತೆಯೇ ಎಲ್ಲವೂ ಮುಗಿದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ವೈದ್ಯರು ಮೂವರನ್ನೂ ಮೃತರೆಂದು ಘೋಷಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.



