ಉತ್ತರ ಕನ್ನಡ: ಜಿಲ್ಲೆಯ ಶಿರಸಿಯಲ್ಲಿ ನಡೆದ ಭೀಕರ ಚಾಕು ಇರಿತ ಪ್ರಕರಣದಲ್ಲಿ ಗಾಯಗೊಂಡಿರುವ ಮಹೇಶ್ ಇದೀಗ ಕಠಿಣ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಆಸ್ಪತ್ರೆಯಿಂದಲೇ ಪ್ರತಿಕ್ರಿಯೆ ನೀಡಿರುವ ಅವರು, “ನನ್ನ ಅಣ್ಣನ ಸಾವಿಗೆ ಕಾರಣರಾದ ಯಾರಿಗೂ ಯಾವುದೇ ವಿನಾಯಿತಿ ನೀಡಬಾರದು” ಎಂದು ಆಗ್ರಹಿಸಿದ್ದಾರೆ.
ಘಟನೆಯ ಹಿನ್ನೆಲೆ ವಿವರಿಸಿದ ಮಹೇಶ್, ತನ್ನ ಪತ್ನಿ ಸುಚಿತ್ರಾ ಕಳೆದ ಐದು ತಿಂಗಳ ಹಿಂದೆ ಮಕ್ಕಳೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದಳು ಎಂದು ತಿಳಿಸಿದ್ದಾರೆ. ಅಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಆಕೆ ಸಂಪರ್ಕದಲ್ಲಿದ್ದಳು. ಆತನ ಜೊತೆಗೇ ಓಡಾಡುತ್ತಿದ್ದಳು ಎಂಬ ಆರೋಪವನ್ನು ಮಹೇಶ್ ಮಾಡಿದ್ದಾರೆ.
ಸಿದ್ದಾಪುರ ಭಾಗದಲ್ಲಿ ಆ ಗುರೂಜಿಗೆ ಒಳ್ಳೆಯ ಹೆಸರು ಇಲ್ಲ. ಆತನ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯವಿದೆ. ಈ ಎಲ್ಲಾ ಹಿನ್ನೆಲೆಯಲ್ಲಿಯೇ ಈ ಕೃತ್ಯ ನಡೆದಿದೆ ಎಂದು ಮಹೇಶ್ ಶಂಕೆ ವ್ಯಕ್ತಪಡಿಸಿದ್ದಾರೆ. ದಾಳಿಯ ವೇಳೆ ಹಂತಕರು ಮಹೇಶ್ ಅವರನ್ನು ಗುರಿಯಾಗಿಸಿಕೊಂಡಿದ್ದು, ತಮ್ಮ ತಮ್ಮನನ್ನು ಉಳಿಸಲು ಮಧ್ಯ ಪ್ರವೇಶಿಸಿದ ಅಣ್ಣ ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
“ನನ್ನ ತಪ್ಪಿಸಲು ಬಂದ ನನ್ನ ಅಣ್ಣ ಬಲಿಯಾದ. ಅವನ ಸಾವಿಗೆ ನ್ಯಾಯ ಸಿಗಬೇಕು” ಎಂದು ಮಹೇಶ್ ಕಣ್ಣೀರಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸುಚಿತ್ರಾ ಸೇರಿದಂತೆ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ, ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ನಡುವೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದು, ಎಲ್ಲ ಆರೋಪಗಳನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



