ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಮತ್ತು ವಜ್ರಾಭರಣ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಕೋಟಿ ರೂಪಾಯಿ ಮೌಲ್ಯದ ಆಭರಣಗಳು ಮಾಯವಾಗಿವೆ.
ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸುತ್ತಿದ್ದ ಹುಬ್ಬಳ್ಳಿ ಮೂಲದ ಮಹಿಳೆಯೊಬ್ಬರಿಗೆ ಈ ಕಹಿ ಅನುಭವವಾಗಿದೆ. ಅವರ ಬ್ಯಾಗ್ ನಲ್ಲಿದ್ದ ಸುಮಾರು 790 ಗ್ರಾಂ ಚಿನ್ನ ಹಾಗೂ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣಗಳು ಕಳುವಾಗಿವೆ ಎಂದು ತಿಳಿದುಬಂದಿದೆ.
ಪ್ರಯಾಣಿಕರ ಬ್ಯಾಗ್‌ನಲ್ಲಿ ಚಿನ್ನಾಭರಣಗಳು ಇರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ತಪಾಸಣೆ ನಡೆಸಿ ಟ್ಯಾಗ್ ಮಾಡಿದ್ದರು. ಆದರೆ ದುಬೈ ತಲುಪಿದ ನಂತರ ಬ್ಯಾಗ್ ಪರಿಶೀಲಿಸಿದಾಗ ಆಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಕಳ್ಳತನದ ಹಿಂದೆ ವಿಮಾನ ನಿಲ್ದಾಣದ ಸಿಬ್ಬಂದಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸಂತ್ರಸ್ತ ಮಹಿಳೆ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.



