ಟಿ20 ವಿಶ್ವಕಪ್ನ ಮೊದಲ ಲೀಗ್ ಹಂತದ ಪಂದ್ಯಗಳು ಅಂತಿಮ ಘಟ್ಟ ತಲುಪಿವೆ. 20 ತಂಡಗಳ ಪೈಕಿ ಈಗಾಗಲೇ 7 ತಂಡಗಳು ಸೂಪರ್-8 ಹಂತಕ್ಕೆ ಪ್ರವೇಶಿಸಿವೆ. ಗ್ರೂಪ್-ಎಯಿಂದ ಭಾರತ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆದಿದೆ.
ಇಂದು ನಡೆಯಲಿರುವ ನಮೀಬಿಯಾ ವಿರುದ್ಧ ಪಾಕಿಸ್ತಾನ ನಡುವಿನ ನಿರ್ಣಾಯಕ ಪಂದ್ಯವನ್ನು ಹೊರತುಪಡಿಸಿದರೆ, ಉಳಿದ ಪಂದ್ಯಗಳು ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ತರಲಾರವು. ಇದೀಗ ಸೂಪರ್-8 ಹಂತದಲ್ಲಿ ಭಾರತ ಎದುರಿಸಲಿರುವ ತಂಡಗಳ ವಿವರ ಹೀಗಿದೆ.
ಫೆಬ್ರವರಿ 22ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ಫೆಬ್ರವರಿ 26ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತವು ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಮೈದಾನದಲ್ಲಿ ನಡೆಯಲಿದೆ.
ಮಾರ್ಚ್ 1ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸೂಪರ್-8 ಹಂತದಲ್ಲಿ ಎರಡು ಗುಂಪುಗಳಿದ್ದು, ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ. ಹೀಗಾಗಿ ಭಾರತ ಪಾಲಿಗೆ ಮುಂದಿನ ಮೂರು ಪಂದ್ಯಗಳು ಅತ್ಯಂತ ಮಹತ್ವದ್ದಾಗಿವೆ. ಉತ್ತಮ ಪ್ರದರ್ಶನ ನೀಡಿದರೆ ಟೀಮ್ ಇಂಡಿಯಾ ಸೆಮಿಫೈನಲ್ ಹಂತ ತಲುಪಲಿದೆ.



