HomeUncategorizedಪಂಚ ಗ್ಯಾರಂಟಿ ಯೋಜನೆಯಿಂದ ಕ್ರಾಂತಿಕಾರಕ ಬದಲಾವಣೆ: ಸಚಿವ ಎಚ್.ಕೆ. ಪಾಟೀಲ

ಪಂಚ ಗ್ಯಾರಂಟಿ ಯೋಜನೆಯಿಂದ ಕ್ರಾಂತಿಕಾರಕ ಬದಲಾವಣೆ: ಸಚಿವ ಎಚ್.ಕೆ. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಡಜನರ ಬದುಕು ಬದಲಾಯಿಸಿದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಕ್ರಾಂತಿಕಾರಕ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಬುಧವಾರ ಜರುಗಿದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಜಾರಿಯಿಂದಾಗಿ ಸಮಾಜವನ್ನು ಸುಧಾರಿಸಿ, ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ರಾಜ್ಯದ ಪ್ರತಿ ಬಡ ಕುಟುಂಬಕ್ಕೆ 5 ಸಾವಿರ ರೂಪಾಯಿ ಪ್ರತಿ ತಿಂಗಳು ತಲುಪಿಸುವ ಕಾರ್ಯವಾಗುತ್ತಿದೆ. ಜಿಲ್ಲೆಯಲ್ಲಿ 2.28 ಲಕ್ಷ ಕುಟುಂಬಗಳನ್ನು ತಲುಪಿದ್ದೇವೆ. 1 ಕೋಟಿ 10 ಸಾವಿರ ಹಣ ಜನರ ಕೈಮುಟ್ಟಿದೆ ಎಂದರು.

ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ರಾಜ್ಯದ ಪ್ರತಿಯೊಂದು ಕುಟುಂಬವನ್ನು ತಲುಪಿರುವುದು ತೃಪ್ತಿಕರವಾಗಿದೆ ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಇಂದು ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗಳು ಪ್ರತಿಯೊಬ್ಬ ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕು ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮುತ್ತುರಾಜ್ ಮಾತನಾಡಿ, ಸಾಕಷ್ಟು ಟೀಕೆಗಳ ನಡುವೆಯೂ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಟೀಕೆಗಳಿಗೆ ಉತ್ತರ ದೊರಕಿದಂತಾಗಿದೆ ಎಂದರು.

ರಾಜ್ಯದ ತಲಾ ಆದಾಯದ ಹೆಚ್ಚಳದಿಂದಾಗಿ ಕೇಂದ್ರಕ್ಕೆ ರಾಜ್ಯದಿಂದ ಹೆಚ್ಚಿನ ತೆರಿಗೆಯನ್ನು ನೀಡಲಾಗುತ್ತಿದೆ. ರಾಜ್ಯದ ಅಂದಾಜು ಒಂದೂವರೆ ಕೋಟಿ ಜನ ಈ ಪಂಚಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪಂಚಗ್ಯಾರಂಟಿ ಯೋಜನೆ ಜಾರಿಯಿಂದಾಗಿ ತಲಾದಾಯದಲ್ಲಿಯೂ ಕೂಡ ರಾಜ್ಯವು ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಗಳನ್ನು ನಿರಂತರವಾಗಿ ಜರುಗಿಸಿ ಅರ್ಹ ಎಲ್ಲ ಫಲಾನುಭವಿಗಳನ್ನು ಗ್ಯಾರಂಟಿ ಯೋಜನೆಗೆ ಒಳಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಉಪಾಧ್ಯಕ್ಷರುಗಳಾದ ನೀಲಮ್ಮ ಬೋಳನವರ, ದೀಪಕ ಲಮಾಣಿ, ಹೇಮಂತಗೌಡ ಪಾಟೀಲ, ಪಿ.ಬಿ. ಅಳಗವಾಡಿ, ಫಕ್ರುಸಾಬ ಚಿಕ್ಕಮಣ್ಣೂರ, ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರುಗಳಾದ ಅಶೋಕ ಮಂದಾಲಿ, ಸಂಗನಗೌಡ ಪಾಟೀಲ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ನಾಗರಾಜ ಶಿವಪ್ಪ ಮಡಿವಾಳರ, ಶರಣಪ್ಪ ಬೆಟಗೇರಿ, ವೀರಯ್ಯ ಮಠಪತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯರುಗಳಾದ ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸಿಕಟ್ಟಿ, ಶರೀಫ್ ಬೆಳೆಯಲಿ, ರಾಜೀವ ಗೊಡಚಪ್ಪ ಕುಂಬಿ, ಶಿವನಗೌಡ ಪಾಟೀಲ, ಆರ್.ಆರ್. ಗಡ್ಡದೇವರಮಠ, ಗೀತಾ ಬೀರಣ್ಣವರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಮುಂತಾದವರು ಉಪಸ್ಥಿತರಿದ್ದರು.

ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಡೋಣಿ ಗ್ರಾಮದ ನಿಂಗಣ್ಣ ಗಡಾದ ಹಾಗೂ ತಂಡದವರು ಪಂಚ ಗ್ಯಾರಂಟಿ ಕುರಿತು ಜನಪದ ಗೀತೆ, ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.

ಇದೇ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಗದಗ ಜಿಲ್ಲೆಯ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಲಾಯಿತು.

ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಗದಗ ಜಿಲ್ಲೆಯ ಇಂದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರು ಸ್ವಾಭಿಮಾನದ ಜೀವನ ಸಾಗಿಸುವ ಉದ್ದೇಶದೊಂದಿಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇಂತಹ ಕಾರ್ಯಕ್ರಮವನ್ನು ಪಂಚಾಯತ ಮಟ್ಟದಲ್ಲಿಯೂ ಆಯೋಜಿಸುವ ಮೂಲಕ ಪಂಚ ಗ್ಯಾರಂಟಿ ಯೋಜನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮುಂದಾಗಬೇಕು ಎಂದರು.

“ಪಂಚ ಗ್ಯಾರಂಟಿಗಳನ್ನು ಮಾನವ ಹಕ್ಕುಗಳನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಗದಗ ಜನತೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟಿದ್ದು, ಬಡಜನರಿಗೆ ದಕ್ಕಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಲಾಗಿತ್ತು. ಆದರೆ ಈ ಮಹತ್ವಾಕಾಂಕ್ಷೆ ಯೋಜನೆಗಳನ್ನು ಅಧಿಕಾರ ವಹಿಸಿದ ಕೆಲ ದಿನಗಳಲ್ಲಿ ಜಾರಿಗೊಳಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಟೀಕೆಗಳಿಗೆ ಪ್ರತ್ಯುತ್ತರ ನೀಡಲಾಗಿದೆ”

  • ಎಚ್.ಕೆ. ಪಾಟೀಲ.
    ಜಿಲ್ಲಾ ಉಸ್ತುವಾರಿ ಸಚಿವರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!