ಮಂಗಳೂರು: ಆರೋಪಿಗಳು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಒಂದೆರಡಲ್ಲ, ಬರೋಬ್ಬರಿ 31 ಪ್ರಕರಣಗಳಲ್ಲಿ ಆರೋಪಿಯಾಗಿದ್ದರೂ 9 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ರೌಡಿಶೀಟರ್ ಸಫ್ವಾನ್ ಹುಸೈನ್ (42) ಕೊನೆಗೂ ಬಂಧನಕ್ಕೊಳಗಾಗಿದ್ದಾನೆ.
ಮಂಗಳೂರು ನಗರದ ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿ ಸೆರೆ ಸಿಕ್ಕಿದ್ದಾನೆ. ಹೆಸರು ಬದಲಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ ಈತ ರಂಜಾನ್ ಹಿನ್ನೆಲೆ ಭಾರತಕ್ಕೆ ಬಂದಿರುವ ಮಾಹಿತಿ ಆಧರಿಸಿ, ಆಂಧ್ರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಟಾರ್ಗೆಟ್ ಗ್ಯಾಂಗ್‌ನಲ್ಲಿ ಸಕ್ರಿಯನಾಗಿದ್ದ ಸಫ್ವಾನ್ ಹುಸೈನ್ ವಿರುದ್ಧ 2 ಕೊಲೆ, ಗ್ಯಾಂಗ್ ರೇಪ್, ಕೊಲೆಯತ್ನ, ದರೋಡೆ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 31 ಪ್ರಕರಣಗಳಿವೆ. ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ ಹಾಗೂ ಸರಗಳ್ಳತನದಲ್ಲಿಯೂ ಭಾಗಿಯಾಗಿದ್ದಾನೆ ಎನ್ನಲಾಗಿದೆ. ನಕಲಿ ಹೆಸರಿನಲ್ಲಿ ಆಧಾರ್ ಪಡೆದು ಆಂಧ್ರ ಪ್ರದೇಶದಲ್ಲಿ ಉಮ್ಮರ್ ಮೊಹಮ್ಮದ್ ನಾಸಿರ್ ಎಂದು ಹೆಸರು ಬದಲಿಸಿಕೊಂಡಿದ್ದ ಆತ 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ.
ರಂಜಾನ್ ಹಬ್ಬದ ಹಿನ್ನೆಲೆ ದೇಶಕ್ಕೆ ಮರಳಿರುವ ಮಾಹಿತಿ ಸಿಕ್ಕ ತಕ್ಷಣ ಎಸಿಪಿ ಮನೋಜ್ ಕುಮಾರ್ ನೇತೃತ್ವದ ತಂಡ ಆಂಧ್ರ ಪ್ರದೇಶದ ರಾಯ್ ಚೋಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.



